Advertisement

ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿವೇಶನ ಕೊರತೆ 

02:42 PM Apr 01, 2017 | |

ವಿಟ್ಲ: ಬಹಳ ಬೇಡಿಕೆಯಿದ್ದ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಚಿವ ಬಿ.ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಸ್ಥಾಪಿಸಲ್ಪಟ್ಟಿದೆ. ಆದರೆ ಈ ಕಾಲೇಜಿಗೆ ಜಾಗ ಇಲ್ಲ. ಕಟ್ಟಡವಿಲ್ಲ. ಮೂಲ ಸೌಲಭ್ಯಗಳೇ ಇಲ್ಲ. ಮುಖ್ಯವಾಗಿ ನಿವೇಶನ ಆಯ್ಕೆಗೆ ರಾಜಕೀಯ ಅಡ್ಡಿಯಾಗಿದೆ!. 

Advertisement

ಸರಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ  ಕಟ್ಟಡದಲ್ಲಿಯೇ ಪ್ರ.ದ.ಕಾಲೇಜಿನ ತರಗತಿಗಳು ಕೂಡ ನಡೆಯುತ್ತಿವೆ. ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲ. ಸಚಿವರು ಕಟ್ಟಡಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ ನಿವೇಶನವನ್ನು  ಆಯ್ಕೆ ಮಾಡಿಲ್ಲ. ಸಚಿವರು ಎರಡು ಮೂರು ಬಾರಿ ಕಂದಾಯ ಅಧಿಕಾರಿಗಳನ್ನು ಕಳುಹಿಸಿ, ನಿವೇಶನವನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದಾರೆ. ಆದರೂ ಇತ್ಯರ್ಥಗೊಳಿಸಲು ಸಾಧ್ಯವಾಗಿಲ್ಲ.

ರಾಜಕೀಯ ಪ್ರವೇಶ
ಪ.ಪೂ.  ಕಾಲೇಜಿನ ಮುಂಭಾಗದಲ್ಲಿ ಅಥವಾ ದ.ಕ. ಜಿ.ಪಂ.ಉ.ಹಿ.ಪ್ರಾ.ಶಾಲೆಯ ಮೇಲ್ಭಾಗದಲ್ಲಿ ನಿವೇಶನವಿದೆ. ಅದು ಸ್ವತಂತ್ರವಾದ ಜಾಗವೂ ಹೌದು. ಆ ಜಾಗದಲ್ಲಿ ಕಟ್ಟಡ, ಆವರಣಗೋಡೆ ನಿರ್ಮಿಸಿ ವಿದ್ಯಾ ಸಂಸ್ಥೆಗಳ ಮಧ್ಯದಲ್ಲೇ ಕಾಲೇಜನ್ನು ಸ್ಥಾಪಿಸುವುದು ಸೂಕ್ತ ಎಂಬ ಅಭಿಪ್ರಾಯಗಳಿವೆ.  ಆದರೆ ಇದಕ್ಕೆ ರಾಜಕೀಯ ಪ್ರವೇಶವಾಗಿದೆ. ಕಾಲೇಜನ್ನು ಕಳೆಂಜಿಮಲೆ ಗುಡ್ಡದ ಬದಿಯಲ್ಲಿ ಅಂದರೆ ಪ್ರಸ್ತುತ ಇರುವ ಕನ್ಯಾನ ಗ್ರಾ.ಪಂ. ಕಟ್ಟಡದ ಪಕ್ಕದಲ್ಲಿ ನಿರ್ಮಿಸಬೇಕೆಂಬ  ಒತ್ತಾಯ ಇದೆ. ಒಂದೇ ಪಕ್ಷದ ಎರಡು ಬಣಗಳು ಇಲ್ಲಿ ವಿಭಿನ್ನವಾದ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ನಾಯಕರಿಗೆ ಇರಿಸುಮುರುಸು ಉಂಟಾಗಿದೆ.

ನಿರ್ಜನ ಪ್ರದೇಶದಲ್ಲಿ ಕಾಲೇಜು ಬೇಡ
ಕಳೆಂಜಿಮಲೆ ಗುಡ್ಡ ಸಮೀಪದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಿಸಿದರೆ ಅಕ್ರಮಗಳಿಗೆ ಕಡಿವಾಣ ಹಾಕಲು ಕಷ್ಟವಾಗಬಹುದು ಎಂಬುದು  ಸ್ಥಳೀಯರ ಅಭಿಪ್ರಾಯ. ಹಲವು ವಿದ್ಯಾ ಸಂಸ್ಥೆಗಳ ನಡುವೆ ಈ ಕಾಲೇಜು ಇದ್ದಾಗ ಸುಗಮವಾಗಿ ನಡೆಸಬಹುದು ಎಂದವರು ಹೇಳುತ್ತಾರೆ.

ವಿದ್ಯಾರ್ಥಿಗಳ ಭವಿಷ್ಯ ಮುಖ್ಯ 
ಕೊನೆ ಕ್ಷಣದಲ್ಲಿ ಕಾಲೇಜು ಆರಂಭವಾದಾಗ ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಒಟ್ಟು 44 ವಿದ್ಯಾರ್ಥಿಗಳು ದಾಖಲಾಗಿದ್ದರು. ಅವರು ಈಗ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಇವರನ್ನು ಸೇರಿಸಿ, ಪ್ರಸ್ತುತ ಕಾಲೇಜಿನಲ್ಲಿ ಒಟ್ಟು 144 ವಿದ್ಯಾರ್ಥಿಗಳಿದ್ದಾರೆ. ಪ್ರಾಂಶುಪಾಲರ ಹುದ್ದೆಯಾಗಲಿ, ಉಪನ್ಯಾಸಕ ಹುದ್ದೆಯಾಗಲಿ ಭರ್ತಿಯಾಗಿಲ್ಲ. ಪ್ರಭಾರ ಪ್ರಾಂಶುಪಾಲರು ಮತ್ತು 25 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 

Advertisement

ಕಚೇರಿ ಇಲ್ಲ, ಕೊಠಡಿಗಳಿಲ್ಲ. ಇಷ್ಟೆಲ್ಲ ಸಮಸ್ಯೆಗಳಿರುವಾಗ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ರಾಜಕೀಯ ಮರೆತು, ಎಲ್ಲಿ ಯೋಗ್ಯವೋ ಅಲ್ಲಿ ನಿವೇಶನ ಮತ್ತು ಆ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೆತ್ತವರು ಹಾಗೂ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next