Advertisement

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

02:29 PM Jan 09, 2025 | Team Udayavani |

ಕಾರ್ಕಳ: ಸರಕಾರದಿಂದ ಲಕ್ಷಾಂತರ ರೂ. ಅನುದಾನ ಪಡೆದು ನಿರ್ಮಿಸಿದ ಕಟ್ಟಡಗಳು ಸದುಪಯೋಗವಾಗದೇ ನಿರುಪಯುಕ್ತವಾಗಿ ಪಾಳು ಬಿದ್ದಿರುವ ಹಲವು ಉದಾಹರಣೆಗಳು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿವೆ.

Advertisement

ಕಲ್ಲೊಟ್ಟೆ ಸದ್ಭಾವನ ನಗರ ರಸ್ತೆ 2ನೇ ವಾರ್ಡ್‌ ಬಂಗ್ಲೆಗುಡ್ಡೆಯಲ್ಲಿ ಕೆಲವು ವರ್ಷಗಳ ಹಿಂದೆ ಒಣಕಸ ವಿಂಗಡನೆ ಕೇಂದ್ರಕ್ಕಾಗಿ ಆರು ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಕೆಲವು ಸಮಯ ಕಾರ್ಯ ನಿರ್ವಹಿಸಿದ ಕಟ್ಟಡ ಈಗ ಪಾಳು ಬಿದ್ದಿದೆ.

4ನೇ ವಾರ್ಡ್‌ ಕಲ್ಲೊಟ್ಟೆ-ಬಂಡಿಮಠ ರಸ್ತೆಯಲ್ಲಿರುವ ಮುಂದುವರಿದ ಕಲಿಕಾ ಕೇಂದ್ರದ ಕಥೆಯೂ ಅಷ್ಟೆ. 2009ರಲ್ಲಿ ಪುರಸಭೆ ವತಿಯಿಂದ ನಿರ್ಮಿಸಿದ ಕಟ್ಟಡವನ್ನು ಅಂದಿನ ಶಾಸಕ ಎಚ್‌. ಗೋಪಾಲ ಭಂಡಾರಿ ಉದ್ಘಾಟಿಸಿದ್ದರು. ಇಲ್ಲಿ ಸ್ವಲ್ಪ ಸಮಯ ಮಾತ್ರ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಅನಂತರ ಅಂಗನವಾಡಿಯಾಗಿ ಕಾರ್ಯನಿರ್ವಹಿಸಿ ಅದೂ ಬೇರೆ ಕಡೆ ಸ್ಥಳಾಂತರಗೊಂಡ ಬಳಿಕ ಪಾಳು ಬಿದ್ದಿದೆ.

ಗಿಡಗಂಟಿಗಳು ಆವರಿಸಿಕೊಂಡಿವೆ
ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡು ಕಟ್ಟಡವೇ ಸರಿಯಾಗಿ ಕಾಣುವುದಿಲ್ಲ. ವಿಷ ಜಂತು, ಕ್ರಿಮಿ. ಕೀಟಗಳು ಕಟ್ಟಡದ ಒಳಗೆ ಸೇರಿಕೊಂಡಿವೆ. ಕಟ್ಟಡದ ಸುತ್ತಲೂ ತ್ಯಾಜ್ಯ ರಾಶಿ ಇದ್ದು, ಸ್ವತ್ಛತೆ ಇಲ್ಲದಂತಾಗಿದೆ. ಬಲೆಗಳು ಆವರಿಸಿಕೊಂಡಿದೆ. ಪುರಸಭೆಯ ಹಳೆ ಸಾಮಗ್ರಿಗಳನ್ನು ಇಟ್ಟು ಇದನ್ನು ಗೋದಾಮಿನಂತೆ ಪರಿವರ್ತಿಸಲಾಗಿದೆ.

Advertisement

ಸದ್ಬಳಕೆ ಹೇಗೆ?
– ಪಾಳು ಬಿದ್ದಂತಿರುವ ಕಟ್ಟಡಗಳನ್ನು ಜನಪ್ರತಿನಿಧಿಗಳು, ತಜ್ಞರ ಜತೆ ಚರ್ಚಿಸಿ ಬಳಕೆ ಬಗ್ಗೆ ಯೋಜನೆ ರೂಪಿಸಬೇಕು.
– ಕಟ್ಟಡಗಳನ್ನು ನವೀಕರಿಸಿ ಸಂಘ, ಸಂಸ್ಥೆಗಳಿಗೆ ಬಾಡಿಗೆ ರೂಪದಲ್ಲಿ ಉಪಯೋಗಕ್ಕೆ ನೀಡಬಹುದು.
– ಮಳಿಗೆಯಾಗಿ ಪರಿವರ್ತಿಸಿ ಸ್ಥಳೀಯರ ವ್ಯಾಪಾರ ಚಟುವಟಿಕೆಗೆ ಅವಕಾಶ ಒದಗಿಸಬಹುದು.
– ಸರಕಾರಿ ತರಬೇತಿ ಕೇಂದ್ರಗಳಾಗಿ ಪರಿವರ್ತಿಸುವುದು.
– ಕಲಾ ಮತ್ತು ಸಾಹಿತ್ಯಾಸಕ್ತ ಚಟುವಟಿಕೆಗಳಿಗೆ ಆರ್ಟ್‌ ಗ್ಯಾಲರಿಯಂತೆ ಮಾಡಬಹುದು.

ಕಟ್ಟಡ ಸದ್ಬಳಕೆಗೆ ಚಿಂತನೆ
ನಿರುಪಯುಕ್ತವಾಗಿರುವ ಪುರಸಭೆಯ ಕಟ್ಟಡ ಗಳನ್ನು ಅಭಿವೃದ್ಧಿಗೊಳಿಸಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇವೆ. ಅನುದಾನ ಕೊರತೆಯಿಂದಾಗಿ ಈ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಅನುದಾನ ಲಭ್ಯತೆ ನೋಡಿ ಕೊಂಡು ಯಾವ ಮಾದರಿಯಲ್ಲಿ ಕಟ್ಟಡವನ್ನು ಮರು ಸದ್ಬಳಕೆ ಮಾಡಬಹುದು ಎಂಬುದನ್ನು ಸಮಾಲೋಚಿಸಿ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು.
-ರೂಪಾ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ, ಕಾರ್ಕಳ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next