ಬಂಟ್ವಾಳ: ಸರಕಾರಿ ನೌಕರರು ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಮನೋಭಾವನೆ ಮೈಗೂಡಿಸಿಕೊಂಡು ತಮ್ಮ ಸದಸ್ಯರಿಗೆ ಕ್ರೀಡಾಕೂಟ ಕಾರ್ಯಕ್ರಮ ಆಯೋಜಿಸಿ ಭಾಗವಹಿ ಸಿರುವುದು ಪ್ರಶಂಸನೀಯ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ತಿಳಿಸಿದರು. ಅವರು ನ. 25ರಂದು ಎಸ್.ವಿ.ಎಸ್. ದೇಗುಲದ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ – 2017 ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಧ್ವಜಾರೋಹಣ ನೆರವೇರಿಸಿ ಇವರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಕ್ರೀಡೆ ಅಗತ್ಯ ಎಂದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ, ಧನಾತ್ಮಕ, ಸಕಾರಾತ್ಮಕ ಧೋರಣೆ ನಿಜಕ್ಕೂ ಇತರರಿಗೆ ಪ್ರೇರಣೆ. ಕ್ರೀಡೆಯಲ್ಲಿ ಭಾಗವಹಿಸುವಿಕೆಯ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಗೆಲುವು ಸಿಗಲು ಸಹಕಾರಿ ಎಂದರು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಕೆಥೋಲಿಕ್ ಸಭಾದ ಅಧ್ಯಕ್ಷ ಸ್ಟಾನಿ ಲೋಬೋ, ಪಿಡಬ್ಲ್ಯುಡಿ ಗುತ್ತಿಗೆದಾರ ಧೀರಜ್ ಟಿ. ನಾಯಕ್, ಕ್ರೀಡಾ ಸಂಘಟಕರಾದ ಅಖೀಲ್ ಶೆಟ್ಟಿ, ನವೀನ್ ಪಿ.ಎಸ್., ಎಸ್.ವಿ.ಎಸ್. ದೇಗುಲ ಶಾಲೆಯ ಮುಖ್ಯ ಶಿಕ್ಷಕಿ ನಂದಿನಿಬಾಯಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೋ, ಗ್ರಾಮಕರಣಿಕರ ಸಂಘದ ಅಧ್ಯಕ್ಷ ತೌಫೀಕ್, ಭಡ್ತಿ ಹೊಂದಿದ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್, ಎಂ.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ಸಂತೋಷ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್, ಶಿಕ್ಷಣ ಸಂಯೋಜಕರಾದ ಪ್ರಕಾಶ್, ಶ್ರೀಕಾಂತ್, ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಜಯರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಕೆ.ರಮೇಶ್ ನಾಯಕ್ ರಾಯಿ ಸ್ವಾಗತಿಸಿ, ಖಜಾಂಚಿ ಜೆ. ಜನಾರ್ದನ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.