Advertisement

ಮುಂಬಡ್ತಿ: ಗೊಂದಲದಲ್ಲಿ ಸರ್ಕಾರ

07:47 AM Oct 15, 2018 | Team Udayavani |

ಬೆಂಗಳೂರು: ಎಸ್ಸಿ/ಎಸ್ಟಿ ಮುಂಬಡ್ತಿ ಪ್ರಕರಣ ಸಮ್ಮಿಶ್ರ ಸರ್ಕಾರವನ್ನು ಸಂದಿಗ್ದಕ್ಕೆ ಸಿಲುಕಿಸಿದಂತೆ ಕಾಣುತ್ತಿದೆ. ಅ. 12ರ ನಂತರ ಸುಪ್ರೀಂಕೋರ್ಟ್‌ ಏನೇ ಸೂಚಿಸಿದರೂ, ಜಾರಿಗೆ ತಂದಿರುವ ಕಾನೂನನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದ ಸರ್ಕಾರ, ಈಗ ಕಾಯ್ದೆ ಜಾರಿ ಕುರಿತಂತೆ ಗೊಂದಲಕ್ಕೆ ಸಿಲುಕಿದೆ.

Advertisement

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಮೌಖೀಕ ಆದೇಶ ನೀಡಿದೆ ಎಂದು ಎಸ್ಸಿ/ಎಸ್ಟಿ ನೌಕರರು ಕಾಯ್ದೆ ಜಾರಿಗೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ಭಾನು ವಾರ ರಾಮನಗರದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅಲ್ಲದೇ ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಅವರನ್ನು ಭೇಟಿ ಮಾಡಿ ಕಾಯ್ದೆ ಜಾರಿಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಪರ್ಯಾಯವಾಗಿ ಸುಪ್ರೀಂಕೋರ್ಟ್‌ ನಿಂದ ಅಧಿಕೃತ ಆದೇಶ ಬರುವವರೆಗೂ ಸರ್ಕಾರ ಯಾವುದೇ ಕಾರಣಕ್ಕೂ ಕಾಯ್ದೆ ಜಾರಿ ಮಾಡಬಾರದು ಎಂದು ಅಹಿಂಸಾ ಸಂಘಟನೆ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಅಹಿಂಸಾ ಸಂಘಟನೆ ಮುಖಂಡರು ಭಾನುವಾರ ಬೆಂಗಳೂರಿನಲ್ಲಿ ಸಭೆ ನಡೆಸಿ, ಸರ್ಕಾರ ಎಸ್ಸಿ/ಎಸ್ಟಿ ನೌಕರರ ಒತ್ತಡಕ್ಕೆ ಮಣಿದು ಕಾಯ್ದೆ ಜಾರಿಗೆ ಮುಂದಾದರೆ, ಅಂದಿನಿಂದಲೇ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಅಸಹ ಕಾರ ಚಳವಳಿ ಆರಂಭಿಸಲು
ನಿರ್ಧರಿಸಿದ್ದಾರೆ. 

ಕಾಯ್ದೆ ಜಾರಿ ಕುರಿತಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸೋಮವಾರ ಸಿಎಸ್‌ ವಿಜಯ್‌ ಭಾಸ್ಕರ್‌, ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಯಾವ ತೀರ್ಮಾನ ತೆಗೆದುಕೊಂಡರೂ ಸರ್ಕಾರಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ
ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅ. 23ರಿಂದ ಸುಪ್ರೀಂಕೋರ್ಟ್‌, ಎಸ್ಸಿ/ಎಸ್ಟಿ ಬಡ್ತಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಅಂತಿಮ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದರಿಂದ ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ಬರುವವರೆಗೂ ಹೇಗಾದರೂ ಮಾಡಿ ತಳ್ಳಿ ಹಾಕುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next