ಧಾರವಾಡ: ಶ್ರೀರಾಮ ನಮ್ಮ ದೇಶಕ್ಕೆ ಪ್ರತಿಷ್ಠಿತ, ಗೌರವಯುತ ಹಾಗೂ ಐತಿಹಾಸಿಕ ವ್ಯಕ್ತಿಯಾಗಿದ್ದು, ಅವರ ಮಂದಿರ ಉದ್ಘಾಟನೆಯಾಗುತ್ತಿರುವುದು ಬಹಳ ಸಂತೋಷ. ಆದರೆ, ಸರ್ಕಾರ ಮತ್ತು ಧರ್ಮ ಮಿಶ್ರಿತ ಆಗಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆ ಸಂವಿಧಾನದ ಶಕ್ತಿಯುತ ಸ್ಥಾನ. ಪ್ರಧಾನಿಗಳು ಸರ್ಕಾರ ಮತ್ತು ಧರ್ಮದಲ್ಲಿ ಅಂತರ ಕಾಪಾಡಿಕೊಳ್ಳಬೇಕು. ಸೋಮನಾಥ ದೇವಸ್ಥಾನ ಪುನರ್ ನಿರ್ಮಾಣ ಮಾಡಲಾಗಿತ್ತು. ಆಗ ಪ್ರಧಾನಿಯಾಗಿದ್ದವರು ಅಲ್ಲಿಗೆ ಹೋಗಿರಲಿಲ್ಲ. ಧರ್ಮದ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಅದು ನಮ್ಮ ಮನೆ, ಹೃದಯ ಮತ್ತು ನೈತಿಕ ನೆಲೆಗಟ್ಟಿನ ಆಧಾರ ಸ್ತಂಭದಲ್ಲಿರಬೇಕು. ಆದರೆ, ಸಾಂವಿಧಾನಿಕ ಸ್ಥಾನದಲ್ಲಿ ಧರ್ಮ ಇರಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡುತ್ತಿದ್ದಾರೆ. ಅವರಿಗೆ ಅಂತರಾಳವಿದ್ದರೆ ಸುಳ್ಳು ಹೇಳಬಾರದು. ಅನ್ಯರಿಗೆ ಅಸಹ್ಯ ಪಡಬಾರದು. ಆದರೆ, ವಿರೋಧಿಗಳನ್ನು ಲೋಕಸಭೆಯಲ್ಲಿ ಏನು ಮಾಡಿದರು ಗೊತ್ತಲ್ವಾ? ಅವರು ಖಾವಿ ಬಟ್ಟೆ ಹಾಕಿಕೊಳ್ಳಲಿ. ಆ ಮೂಲಕ ಸ್ವರ್ಗ ಕಾಣಲಿ. ಆದರೆ, ರಾಮನ ಹೆಸರಲ್ಲಿ ಇದೆಲ್ಲ ಮಾಡುತ್ತಿದ್ದಾರೆ. ರಾಮನ ಭಕ್ತರಾಗಿದ್ದರೆ ರಾಮನಂತೆ ನಡೆದುಕೊಳ್ಳಬೇಕು. ಅಧಿಕಾರ ದುರುಪಯೋಗ ಆಗಬಾರದು. ದೇಶದ ಹಳ್ಳಿಗಳಲ್ಲಿ ಮುಗ್ಧ ಜನರಿದ್ದಾರೆ. ಆ ಜನರಿಗೆ ಧರ್ಮದಲ್ಲಿ ನಂಬಿಕೆ ಇದೆ. ಶರಣರ ತತ್ವದಲ್ಲಿ ಸಮಾನತೆ, ಸಹೋದರತೆ ಇದೆ. ಮೋದಿ ಅವರು ರಾಜಕೀಯವನ್ನು ಮಂದಿರದಿಂದ ದೂರವಿಡಬೇಕು ಎಂದರು.
ಆಡಳಿತ ಮಾಡುವ ಸರ್ಕಾರ ಮತ್ತು ಧರ್ಮ ಯಾವತ್ತಿಗೂ ಮಿಶ್ರಣ ಆಗಬಾರದು. ಪ್ರಜಾಪ್ರಭುತ್ವದಲ್ಲಿ ಇದನ್ನೇ ಹೇಳಲಾಗಿದೆ. ಸರ್ಕಾರದಲ್ಲಿರುವವರು ಧರ್ಮದಿಂದ ಅಂತರ ಕಾಪಾಡಿಕೊಳ್ಳಬೇಕು. ಅಯೋಧ್ಯೆಗೆ ಟ್ರಸ್ಟ್ ಮಾಡಿದ್ದಾರೆ. ಆ ಟ್ರಸ್ಟ್‌ಗೆ ಸಮಗ್ರವಾಗಿ ಎಲ್ಲವನ್ನೂ ಬಿಡಬೇಕು ಎಂದರು.
ನಾವು ಹಿಂದೂ ಧರ್ಮ ಎತ್ತಿ ಹಿಡಿಯುವವರು ಎಂಬುದಾಗಿ ಹೇಳುತ್ತಾರೆ. ಇವರು ಧರ್ಮ ಎತ್ತಿ ಹಿಡಿಯುವುದು ಸರಿಯಲ್ಲ. ಯಾವುದೇ ದೃಷ್ಟಿಯಿಂದ ಧರ್ಮವನ್ನು ರಾಜಕೀಯವಾಗಿ ಬಳಸಬಾರದು. ಅಯೋಧ್ಯೆ ಮಂದಿರ ಇನ್ನೂ ಪೂರ್ಣ ಮುಗಿದಿಲ್ಲ. ಈಗ ಅದನ್ನು ಉದ್ಘಾಟನೆ ಮಾಡುವ ಅವಸರವೇನಿತ್ತು? ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಅದಕ್ಕಾಗಿ ಈ ಅವಸರ ಮಾಡಿದ್ದಾರೆ. ಇನ್ನು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಸಹ ಸರಿಯಾಗಿಲ್ಲ. ಕಾಂಗ್ರೆಸ್ ಮಾಡಬಾರದ್ದನ್ನೆಲ್ಲ ಮಾಡಿದ್ದಕ್ಕೆ ಇವತ್ತು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.