Advertisement

ಕಮಲ ಅರಳಿಸಿದ ಗೋಪಾಲಯ್ಯ

10:16 PM Dec 09, 2019 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ರೋಚಕ ಉಪಸಮರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೆ.ಗೋಪಾಲಯ್ಯ, ಚೊಚ್ಚಲ ಬಾರಿಗೆ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಅನರ್ಹ ಹಣೆಪಟ್ಟಿಯಿಂದ ಮುಕ್ತಿಯಾಗಿದ್ದಾರೆ. ಜತೆಗೆ ಪಾಲಿಕೆ ಸದಸ್ಯ ಸ್ಥಾನದಿಂದ ಶಾಸಕ ಹುದ್ದೆಗೇರುವ ಕಾಂಗ್ರೆಸ್‌ ಅಭ್ಯರ್ಥಿ ಎಂ. ಶಿವರಾಜು ಕನಸನ್ನು ಭಗ್ನಗೊಳಿಸಿದ್ದಾರೆ. ಕ್ಷೇತ್ರ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದ ಜೆಡಿಎಸ್‌ ಗಿರೀಶ್‌ ಕೆ.ನಾಶಿ ಮೂರನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡಿದ್ದಾರೆ.

Advertisement

ದೇವೇಗೌಡರ ಗರಡಿಯಲ್ಲಿ ಪಳಗಿದ್ದ ಗೋಪಾ ಲಯ್ಯ, ಉಪಚುನಾವಣೆಯಲ್ಲಿ ಭೇದಿಸಲಾಗ ದಂತಹ ಕಾರ್ಯತಂತ್ರ ಹೆಣೆದು ಎದುರಾಳಿ ಅಭ್ಯ ರ್ಥಿಗಳನ್ನು ಧೂಳಿಪಟಗೊಳಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗದೇ ಇದ್ದುದಕ್ಕೆ ಅಸಮಾಧಾನಗೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು.

ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಿದ ಗೋಪಾ ಲಯ್ಯ, ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೇದ್ದಿತು. ಇದೆಲ್ಲವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ತಾವೇ ಖುದ್ದು ಬಂದು ಪ್ರಮುಖರಾದ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಮನವೊಲಿಸಿ ಪ್ರಚಾರಕ್ಕಿಳಿ ಸಿದ್ದು, ಬಿಜೆಪಿಗೆ ವರವಾಯಿತು. ಇದರಿಂದಾಗಿ ಆರಂಭ ದಿಂದಲೇ ಬಿಜೆಪಿ ಕಾರ್ಯಕರ್ತರು ಹಾಗೂ ಗೋಪಾಲಯ್ಯ ಬೆಂಬಲಿ ಗರು ಒಟ್ಟುಗೂಡಿ ಪ್ರಚಾರ ನಡೆಸಿ ಮತ ಗಳು ಹಂಚಿ ಹೋಗದಂತೆ ಎಚ್ಚರ ವಹಿಸಿದರು.

ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಸ್ತುವಾರಿಗಳಾಗಿದ್ದ ಸಚಿವ ವಿ.ಸೋಮಣ್ಣ, ಎಸ್‌.ಸುರೇಶ್‌ ಕುಮಾರ್‌ ಯೋಜಿತ ರೀತಿಯಲ್ಲಿ ಪ್ರಚಾರ ನಡೆಸಿ ಬಿಜೆಪಿ ಮತಗಳು ಒಗ್ಗೂಡುವಂತೆ ಮಾಡಿದರು. ಒಂದು ಕಾಲದಲ್ಲಿ ಆಪ್ತರು, ಪಕ್ಷ ನಿಷ್ಠರು ಆಗಿದ್ದ ಗೋಪಾಲಯ್ಯ, ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದು, ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗುವಂತಾಯಿತು. ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಜೆಡಿಎಸ್‌ ನಾಯಕರು, ಗೋಪಾ ಲಯ್ಯಗೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಸೂಕ್ತ ಅಭ್ಯರ್ಥಿ ಸಿಗದೇ ಸೋಲನುಭವಿಸುವಂ ತಾಯಿತು.

ಗೆದ್ದವರು
ಕೆ.ಗೋಪಾಲಯ್ಯ (ಬಿಜೆಪಿ)
ಪಡೆದ ಮತ: 85,889
ಗೆಲುವಿನ ಅಂತರ‌: 54,386

Advertisement

ಸೋತವರು
ಎಂ. ಶಿವರಾಜು (ಕಾಂಗ್ರೆಸ್‌)
ಪಡೆದ ಮತ: 31,503

ಗಿರಿಶ್‌ ಕೆ.ನಾಶಿ(ಜೆಡಿಎಸ್‌)
ಪಡೆದ ಮತ: 23,516

ಗೆದ್ದದ್ದು ಹೇಗೆ?
-ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿ ಕಾರ್ಯ, ಸಿಎಂರಿಂದ ಸಚಿವ ಸ್ಥಾನದ ಭರವಸೆ

-ಎಚ್‌.ಡಿ. ದೇವೇಗೌಡರ ಕುಟುಂಬದ ಬಗ್ಗೆ ಯಾವುದೇ ಟೀಕೆ ಮಾಡದಿದ್ದುದು

-ಬಿಜೆಪಿಯ ಅತೃಪ್ತರನ್ನು ಸಮಾಧಾನಪಡಿಸಿ ಭಿನ್ನಮತ ತಲೆದೋರದಂತೆ ಎಚ್ಚರ ವಹಿಸಿದ್ದು

ಸೋತದ್ದು ಹೇಗೆ?
-ಎದುರಾಳಿ ಅಭ್ಯರ್ಥಿಗೆ ವಾರ್ಡ್‌ ಮೀರಿದ ಜನಪ್ರಿಯತೆ ಇಲ್ಲದ್ದು, ಕ್ಷೇತ್ರದ ಜನರಲ್ಲಿ ಅಭ್ಯರ್ಥಿ ಕುರಿತು ಸೂಕ್ತ ವಿಶ್ವಾಸ ಮೂಡಿಸದೇ ಇದ್ದದ್ದು

-ಪ್ರಭಾವಿ ನಾಯಕರ ಪರಿಣಾಮಕಾರಿ ಪ್ರಚಾರದ ಕೊರತೆ, ಪಕ್ಷದಲ್ಲೇ ಇದ್ದುಕೊಂಡು ಪಿತೂರಿ ಮಾಡುವವರ ವಿರುದ್ಧ ತಗೆದುಕೊಳ್ಳದ್ದು

-ಅಭ್ಯರ್ಥಿ ಪರ ನಿರ್ದಿಷ್ಟ ಅಜೆಂಡಾ, ಸೂಕ್ತ ಕಾರ್ಯತಂತ್ರವಿಲ್ಲದೆ ಉಪಚುನಾವಣೆ ಎದುರಿಸಿದ್ದು, ಪ್ರಮುಖ ನಾಯಕರು ಮತಗಳನ್ನು ಸೆಳೆಯಲು ವಿಫ‌ಲವಾಗಿದ್ದು

ಮೊದಲ ಹಂತದಲ್ಲಿ ನಮಗೆಲ್ಲ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು, ನಾನು ಒಂದೇ ಮನೆಯ ಸದಸ್ಯರಂತಾಗಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
-ಕೆ. ಗೋಪಾಲಯ್ಯ, ಬಿಜೆಪಿ ಅಭ್ಯರ್ಥಿ

ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಚುನಾವಣೆ ಹಿಂದಿನ ದಿನ ಹಣದ ಪ್ರಭಾವ ಕೆಲಸ ಮಾಡಿದೆ.
-ಎಂ.ಶಿವರಾಜು, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next