ಬ್ರಸೆಲ್ಸ್: ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಬಳಕೆ ಹೆಚ್ಚಿಸಲು ಏಕಸ್ವಾಮ್ಯ ನೀತಿಯನ್ನು ಗೂಗಲ್ ಸಂಸ್ಥೆ ಅನುಸರಿಸುತ್ತಿದೆ ಎಂಬ ಕಾರಣಕ್ಕೆ ಐರೋಪ್ಯ ಒಕ್ಕೂಟದ ಸ್ಪರ್ಧಾತ್ಮಕ ಆಯೋಗ 34 ಸಾವಿರ ಕೋಟಿ ರೂ. (434 ಕೋಟಿ ಯೂರೋ) ದಂಡ ವಿಧಿಸಿದೆ. ಇದು ತಂತ್ರಜ್ಞಾನ ವಲಯದಲ್ಲೇ ಅತಿದೊಡ್ಡ ಮೊತ್ತದ ದಂಡವಾಗಿದೆ. ಇತರ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಯುದ್ಧ ಆರಂಭಿಸಿದ ವೇಳೆಯೇ ಈ ದಂಡ ವಿಧಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಸಂಬಂಧ ಆಯೋಗ ತನಿಖೆ ನಡೆಸುತ್ತಿತ್ತು. ಉಚಿತ ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಅನ್ನು ನೀಡುವಾಗ ಗೂಗಲ್ ಸರ್ಚ್ ಅನ್ನು ಇನ್‌ಸ್ಟಾಲ್ ಮಾಡಿರಲೇ ಬೇಕು ಎಂಬ ಷರತ್ತನ್ನು ಗೂಗಲ್ ಹಾಕುತ್ತಿದೆ. ಸರ್ಚ್ ಮೂಲಕ ಗೂಗಲ್ ಜಾಹೀರಾತು ಆದಾಯ ಗಳಿಸುತ್ತಿದೆ ಎಂದು ಸ್ಪರ್ಧಾತ್ಮಕ ಆಯೋಗದ ಮುಖ್ಯಸ್ಥೆ ಮಾರ್ಗರೆಟ್ ವೆಸ್ಟೇಯರ್ ಹೇಳಿದ್ದಾರೆ. 90 ದಿನಗಳೊಳಗೆ ಈ ನೀತಿಯನ್ನು ಹಿಂಪಡೆಯದಿದ್ದಲ್ಲಿ ದಂಡ ಪಾವತಿ ಮಾಡಬೇಕು ಎಂದೂ ಆಯೋಗ ತಿಳಿಸಿದೆ.