ವಿಧಾನ ಪರಿಷತ್ತು: ಸಂಕಷ್ಟಕ್ಕೆ ಸಿಲುಕಿರುವ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಮತ್ತು ಸಾಲ ನೀಡಿದ ಸಹಕಾರಿ ಬ್ಯಾಂಕ್ ಗಳ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ದಸರಾ ನಂತರ ಸಭೆ ಕರೆಯಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಗುರುವಾರ ನಿಯಮ 330ರ ಅಡಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಅನೇಕ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುತ್ತಿರುವುದು ಹಾಗೂ ಅವುಗಳಿಗೆ ಆರ್ಥಿಕ ನೆರವು ನೀಡಿದ ಸಹಕಾರಿ ಬ್ಯಾಂಕ್‌ಗಳ ದುಸ್ಥಿತಿ ಮತ್ತು ಕಬ್ಬು ಬೆಳೆಗಾರರ ಪರಿಸ್ಥಿತಿಯ ಅರಿವಿದೆ. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ಸಕ್ಕರೆ ಸಚಿವರು ಹಾಗೂ ಇಂಧನ ಸಚಿವರ ನೇತೃತ್ವದಲ್ಲಿ ಅಪೆಕ್ಸ್, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು, ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು ಎಂದರು.
ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದು, ದುರುಪಯೋಗ ಮಾಡಿಕೊಳ್ಳುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಆದರೆ, ಸಕ್ಕರೆ ಬಗ್ಗೆ ಪರಿಶೀಲನೆ ಮಾಡಲಿಕ್ಕೂ ಬಿಡುವುದಿಲ್ಲ. ಅಷ್ಟರಮಟ್ಟಿಗೆ ಈ ಸಕ್ಕರೆ ಲಾಬಿ ಇದೆ. ಅ.15ರ ನಂತರ ನಡೆಯುವ ಈ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
1,603 ಕೋಟಿ ಬಾಕಿ: ಇದೇ ವೇಳೆ ರಾಜ್ಯದಲ್ಲಿ ಒಟ್ಟಾರೆ 87 ಸಕ್ಕರೆ ಕಾರ್ಖಾನೆಗಳು ನೋಂದಾವಣಿಗೊಂಡಿದ್ದು, ಈ ಪೈಕಿ 65 ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಶೇ.80ರಷ್ಟು ಸಕ್ಕರೆ ಉತ್ಪಾದನೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಪಾಲು ಶೇ.80ರಷ್ಟಿದೆ. ರಾಜ್ಯದ 23 ಸಕ್ಕರೆ ಕಾರ್ಖಾನೆಗಳು ದುಡಿಯುವ ಬಂಡವಾಳ ಮತ್ತು ಅವಧಿ ಸಾಲದ ರೂಪದಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳು ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ 1,936.38 ಕೋಟಿ ರೂ. ಸಾಲ ಪಡೆದಿವೆ. ಇದರಲ್ಲಿ 2021ರ ಮಾರ್ಚ್ ಅಂತ್ಯಕ್ಕೆ 1,603.70 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಸುಸ್ತಿ ಸಾಲ 418.42 ಕೋಟಿ ಮತ್ತು ಅನುತ್ಪಾದಕ ಆಸ್ತಿ 389.96 ಕೋಟಿ ರೂ. ಆಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಭೆಗೆ ಮಾಹಿತಿ ನೀಡಿದರು.
2020-21ನೇ ಹಂಗಾಮಿನಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ 440.84 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು, 42.94 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷದಂತೆ ಈ ಬಾರಿಯೂ ಅಕ್ಟೋಬರ್-ನವೆಂಬರ್‌ನಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಿಸಲಿವೆ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸದಸ್ಯರಾದ ಹನುಮಂತ ನಿರಾಣಿ, ಆರ್.ಬಿ. ತಿಮ್ಮಾಪೂರ, ಬಸವರಾಜ ಇಟಗಿ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗೂ ಅದರ ಮರುಪಾವತಿಗೆ ಇರುವ ಅವಧಿ ವಿಸ್ತರಣೆ ಸೇರಿದಂತೆ ಕಾರ್ಖಾನೆಗಳು ಮತ್ತು ಬೆಳೆಗಾರರ ನೆರವಿಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.