Advertisement

ಸೌಖ್ಯ ಸಂಧಾನ

10:56 PM Nov 18, 2019 | Lakshmi GovindaRaj |

ನನಗೆ 45 ವರ್ಷ. ಒಳ್ಳೆಯ ಸರ್ಕಾರಿ ಉದ್ಯೋಗ­ದಲ್ಲಿದ್ದೇನೆ. ಒಳ್ಳೆಯ ಸಂಬಳ ಇದೆ. ಆದರೂ ಕೆಲವು ಆರ್ಥಿಕ ಅಡಚಣೆಗಳಿವೆ. ನನ್ನ ಹೆಂಡತಿ ಹೊರದೇಶದಲ್ಲಿ ಕೆಲಸದಲ್ಲಿದ್ದಾಳೆ. ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಾಳೆ. ನಾನು ತುಂಬಾ ಸಂಶಯ ಸ್ವಭಾವದವನು. ಪ್ರತಿಯೊಂದು ವಿಷಯದಲ್ಲೂ ಸಂಶಯ. ಹಾಗಾಗಿ, ಹೆಂಡತಿಗೆ ಎರಡು ಸಲ ಎಚ್‌ಐವಿ ಟೆಸ್ಟ್‌ ಮಾಡಿಸಿದೆ. ನೆಗೆಟಿವ್‌ ಬಂದಿದೆ. ಆದರೂ ನನಗೆ ಮಿಲನಕ್ರಿಯೆ ಮಾಡಲು ತುಂಬಾ ಹೆದರಿಕೆ. ನಾನು ತಿಳಿದ ಪ್ರಕಾರ Window periodನಲ್ಲಿ ಇದ್ದರೆ ಎಚ್‌ಐವಿ ಬರುತ್ತದೆ ಅಂತ. ದಯಮಾಡಿ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನೆಮ್ಮದಿಯ ಜೀವನ ಮಾಡಲು ಸಹಕರಿಸಿ.
1.ಎಚ್‌ಐವಿ ನೆಗೆಟಿವ್‌ ಇದ್ದರೆ ಅಸುರಕ್ಷಿತ ಮಿಲನ ಕ್ರಿಯೆ ಮಾಡಬಹುದೇ?

2.ಎಚ್‌ಐವಿ ಟೆಸ್ಟ್‌ ಆದ ಮೇಲೆ ಎಚ್‌ಐವಿ ಟೆಸ್ಟ್‌ ಮಾಡಿಸಬೇಕಾ ಅಥವಾ ಬೇರೆ ಯಾವುದೇ ಟೆಸ್ಟ್‌ ಮಾಡಬೇಕೆ?

3.Window period ಎಂದರೇನು, ನೆಗೆಟಿವ್‌ ಇದ್ದರೆ ಮುಖರತಿ ಮಾಡಬಹುದೇ, ಅಸುರಕ್ಷಿತ ಮಿಲನಕ್ರಿಯೆ ಮಾಡಬಹುದೇ?

ದಯಮಾಡಿ ಮೇಲಿನ ಸಂಶಯಗಳಿಗೆ ಉತ್ತರಿಸಬೇಕಾಗಿ ವಿನಂತಿ.
-ಸುಕೇಶ್‌, ಮಂಗಳೂರು
ಗಂಡ-ಹೆಂಡತಿ ಮಧ್ಯೆ ಇರಬೇಕಾದ ಒಂದು ಮುಖ್ಯ ವಿಷಯ ಎಂದರೆ ನಂಬಿಕೆ. ಒಬ್ಬರಿಗೊಬ್ಬರ ಮೇಲೆ ಪೂರ್ಣ ವಿಶ್ವಾಸ ಇರಬೇಕು. ನಿಮ್ಮ ಮನೆಯ ಆರ್ಥಿಕ ಅಡಚಣೆ ಸರಿಪಡಿಸಲು ನಿಮ್ಮ ಹೆಂಡತಿ ಹೊರಗೆ ದುಡಿಯುತ್ತಿ­ರುವುದು. ಅವಳ ಮೇಲೆ ಪ್ರೀತಿ, ವಿಶ್ವಾಸ ಇಟ್ಟುಕೊಳ್ಳಬೇಕು. ನಿಮಗೆ ಅತಿಯಾದ ಸಂಶಯದ ಮನಸ್ಸು ಇದ್ದರೆ ಒಮ್ಮೆ ಮಾನಸಿಕ ತಜ್ಞರನ್ನು ಭೆಟ್ಟಿಯಾಗಿ. Window period ಎಂದರೆ ಒಮ್ಮೆ ಎಚ್‌ಐವಿ ವೈರಾಣು ದೇಹ ಪ್ರವೇಶಿದ ಮೇಲೆ ತಕ್ಷಣವೇ ಮತ್ತು ಕೆಲವು ದಿವಸಗಳ ತನಕ ಎಚ್‌ಐವಿ ಪರೀಕ್ಷೆಯಲ್ಲಿ ಕಂಡುಹಿಡಿಯಲಾಗುವುದಿಲ್ಲ ಮತ್ತು ರಿಸಲ್ಟ್ ಪಾಸಿಟಿವ್‌ ಅಥವಾ ನೆಗೆಟಿವ್‌ ಅಂತ ಗೊತ್ತಾಗುವುದಿಲ್ಲ. ದೇಹದಲ್ಲಿ ವೈರಸ್‌ಗೆ ಪ್ರತಿ ವಸ್ತುಗಳು (HIV antibodies) ಉತ್ಪತ್ತಿಯಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಇದು ಸಾಧಾರಣವಾಗಿ 2 ರಿಂದ 3 ತಿಂಗಳು ತೆಗೆದುಕೊಳ್ಳುತ್ತದೆ. ವೈರಸ್‌ನ ದೇಹ ಪ್ರವೇಶದಿಂದ ಹಿಡಿದು ಎಚ್‌ಐವಿ ಟೆಸ್ಟ್‌ ರಿಪೋರ್ಟ್‌ ಬರುವವರೆಗಿನ ದಿನಗಳಿಗೆ Window period ಅನ್ನುತ್ತಾರೆ. ಈ ಸಮಯದಲ್ಲಿ ಮಿಲನಕ್ರಿಯೆ ಮಾಡಿದರೂ ಎಚ್‌ಐವಿ ಸೋಂಕುಂಟಾಗಬಹುದು. ಇನ್ನೂ ಹೆಚ್ಚಿನ ಪರೀಕ್ಷೆ HIV PCR test Window period ಕಂಡು ಹಿಡಿಯಬಹುದು. ನಿಮಗೆ ಅಷ್ಟು ನಂಬಿಕೆ ಇಲ್ಲದಿದ್ದರೆ ಕಾಂಡೋಮ್‌ ಬಳಸಿ ಮಿಲನಕ್ರಿಯೆ ಮಾಡಿ. HIV PCRtest negative ಇದ್ದರೆ ಯಾವುದೇ ರಕ್ಷಣೆ ಇಲ್ಲದೆ ಮಿಲನಕ್ರಿಯೆ ಮಾಡಬಹುದು.

Advertisement

ನನ್ನ ವಯಸ್ಸು 23. ಗಂಡನದು 26. ಮದುವೆಯಾಗಿ 3 ವರ್ಷಗಳಾಗಿವೆ. ನಾವು ಕುಟುಂಬ ಯೋಜನೆ ಮಾಡುತ್ತಿದ್ದೇವೆ. ಹೀಗಾಗಿ ನಾನು ಒಮ್ಮೆಯೂ ಗರ್ಭಿಣಿ ಆಗಿಲ್ಲ. ಆದರೆ ನನ್ನ ಸ್ತನಗಳನ್ನು ಅದುಮಿದಾಗ ಹಾಲಿನಂಥ ಒಂದು ದ್ರವ ಸ್ರವಿಸುತ್ತದೆ. ನನ್ನ ಸಮಸ್ಯೆ ಏನೆಂದರೆ, ಈ ರೀತಿ ಎಲ್ಲಾ ವಿವಾಹಿತ ಮಹಿಳೆಯರಿಗೂ ಆಗುತ್ತದೆಯೇ ಅಥವಾ ನನ್ನಲ್ಲಿಯೇ ಏನಾದರೂ ದೋಷವಿದೆಯೇ? ವಿವಾಹವಾಗದಿರುವ ಹೆಣ್ಣು ಮಕ್ಕಳಿಗೂ ಹೀಗೆ ಆಗುತ್ತದೆಯೇ? ದಯವಿಟ್ಟು ಈ ನನ್ನ ಗೊಂದಲಗಳಿಗೆ ಪರಿಹಾರ ತಿಳಿಸಿ.
-ಸಂಯಮಾ, ಬಾಗಲಕೋಟೆ
ಗರ್ಭಧಾರಣೆ ಇಲ್ಲದಿದ್ದರೂ ಸ್ತನಗಳಲ್ಲಿ ದ್ರವ ಸ್ರವಿಸುವುದನ್ನು Galacrorrhoea ಎನ್ನುತ್ತೇವೆ. ಇಂತಹ ಸ್ತ್ರೀಯರಲ್ಲಿ prolacti ಹಾರ್ಮೋನಿನ ಪ್ರಮಾಣ ಹೆಚ್ಚಾಗಿ ಇರಬಹುದು. ಬಂಜೆತನಕ್ಕೆ ಇದೂ ಒಂದು ಕಾರಣವಾಗಬಹುದು. ನೀವು ಸ್ತ್ರೀರೋಗ ತಜ್ಞರ ಬಳಿ ಪರೀಕ್ಷಿಸಿಕೊಳ್ಳಿ. ವಿವಾಹವಾದ ಎಲ್ಲ ಹೆಂಗಸರಿಗೂ ಹೀಗೆ ದ್ರವ ಸ್ರವಿಸುವುದಿಲ್ಲ. ವಿವಾಹವಾಗದಿರುವ ಹೆಣ್ಣು ಮಕ್ಕಳಲ್ಲಿಯೂ ಹಾರ್ಮೋನ್‌ ತೊಂದರೆಯಿಂದ ಅಥವಾ ಔಷಧಗಳ ಪಾರ್ಶ್ವಪ್ರಯೋಗದಿಂದ ಹೀಗಾಗಬಹುದು. ಹಾರ್ಮೋನಿನ ತೊಂದರೆಯಿಂದ ಮಕ್ಕಳಾಗಲು ಕಷ್ಟ ಆಗಬಹುದು. ಆದರೆ ಇದಕ್ಕಾಗಿ ಭಯಪಡುವ ಅಗತ್ಯ ಇಲ್ಲ. ನುರಿತ ವೈದ್ಯರ ಬಳಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಿರಿ.

ನನ್ನ ವಯಸ್ಸು 28. ಹಸ್ತಮೈಥುನ ಮಾಡಿದ ನಂತರ ನನ್ನ ಜನನಾಂಗ ದಪ್ಪವಾಗಿಬಿಡುತ್ತದೆ. ಇದರಿಂದ ಮುಂದೆ ನನಗೆ ಏನಾದರೂ ತೊಂದರೆ ಇದೆಯೇ? ದಯವಿಟ್ಟು ತಿಳಿಸಿ.
-ವಾಮನ, ಮಂಗಳೂರು
ಜನನಾಂಗದಲ್ಲಿ ಸೋಂಕೇನಾದರೂ ಇದೆಯೇ ಅಥವಾ ಜನನಾಂಗದ ಬಿಗಿ ಚರ್ಮದ ತೊಂದರೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಸರ್ಜನ್‌ರನ್ನು ಭೆಟ್ಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬಹುದು.

ನನಗೆ 18 ವರ್ಷ ವಯಸ್ಸು . ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದೇನೆ. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಾ ಇದ್ದೇನೆ. ಅವಳೂ ಸಹ ನನ್ನನ್ನು ಪ್ರೀತಿಸುತ್ತಿದ್ದಾಳೆ. ಮುಂದೆ ನಾನು ಕೆಲಸ ಸಿಕ್ಕಿದ ಮೇಲೆ ಅವಳನ್ನೇ ಮದುವೆ ಆಗಬೇಕು ಎಂದು ಅಂದು­ಕೊಂಡಿದ್ದೇನೆ. ಆದರೆ ಅವಳು ನನಗಿಂತ 2 ತಿಂಗಳು ದೊಡ್ಡವಳು. ಅದಕ್ಕೆ ಏನು ಮಾಡಬೇಕು ಎಂದು ನೀವೇ ಹೇಳಿ.
-ವಿಶ್ವಾಸ್‌, ಬೆಂಗಳೂರು
ನಿಮಗಿನ್ನೂ 18 ವರ್ಷ ವಯಸ್ಸು. ಓದಿನಲ್ಲಿ ಗಮನ ಹರಿಸಿ. ಈಗಲೇ ಪ್ರೀತಿ, ಪ್ರೇಮ, ಪ್ರಣಯ, ಅಂತ ನಿಮ್ಮ ಮುಂದಿನ ಗುರಿ, ಜೀವನ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ವಿದ್ಯೆ ಮುಗಿದ ಮೇಲೆ ಅವಳ ಮೇಲೆ ನಿಮಗೆ ಇನ್ನೂ ಪ್ರೀತಿಯಿದ್ದರೆ ಮದುವೆ ಮಾಡಿಕೊಳ್ಳಿ. 2 ತಿಂಗಳು ದೊಡ್ಡವಳಿದ್ದರೆ, ಅದರಿಂದ ತೊಂದರೆ ಏನೂ ಇಲ್ಲ.

* ಡಾ. ಪದ್ಮಿನಿ ಪ್ರಸಾದ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next