ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಪ್ರೇಮಿಗಳು ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿ ದ್ದರು. ಆದರೆ ಕೊರೊನಾ ಎಂಬ ಮಹಾಮಾರಿ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಸಿನಿಮಾ ಬಿಡುಗಡೆ ಬಿಡಿ, ಅದ್ಧೂರಿ ಕಾರ್ಯಕ್ರಮ ಮಾಡಿ, ಚಿತ್ರದ ಆಡಿಯೋ ರಿಲೀಸ್, ಮುಹೂರ್ತ ಮಾಡಬೇಕೆಂದುಕೊಂಡಿದ್ದ ಸಿನಿಮಂದಿಯ ಕನಸಿಗೆ ಕೊರೊನಾ ಅಡ್ಡಗಾಲು ಹಾಕಿದೆ. ಸದ್ಯಕ್ಕೆ ಸಿನಿಮಾ ಬಿಡುಗಡೆ ಯಾವಾಗಿನಿಂದ ಆರಂಭವಾಗುತ್ತದೆ ಎಂಬ ಸ್ಪಷ್ಟತೆ ಯಾರಿಗೂ ಇಲ್ಲ.
ಕೋಟಿಗೊಬ್ಬ -3 ನಿರ್ಮಾಪಕ ಸೂರಪ್ಪ ಬಾಬು ಕೂಡಾ ಸದ್ಯ ರಿಲೀಸ್ ಬಗ್ಗೆ ಹೆಚ್ಚು ಯೋಚಿಸಿಲ್ಲ. ಅದಕ್ಕೆ ಕಾರಣ ಸಿನಿಮಾ ಮೇಲಿನ ನಂಬಿಕೆ. ಈ ಬಗ್ಗೆ ಮಾತನಾಡುವ ಸೂರಪ್ಪ ಬಾಬು, ಸಿನಿಮಾ ಬಿಡುಗಡೆಗೆ ಯಾವತ್ತಿನಿಂದ ಅನುಮತಿ ಸಿಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಿರುವಾಗ ನಾವು ರಿಲೀಸ್ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ. ಮೊದಲು ಚಿತ್ರ ಬಿಡುಗಡೆ ಆರಂಭವಾಗಬೇಕು, ಜನ ಸಿನಿಮಾ ನೋಡಲು ಬರಬೇಕು. ಅವರು ಮೊದಲಿನಂತೆ ಮುಕ್ತವಾಗಿ ಸಿನಿಮಾವನ್ನು ಎಂಜಾಯ್ ಮಾಡಬೇಕು.
ಆ ನಂತರ ನಾನು ಸಿನಿಮಾ ಬಿಡುಗಡೆ ಬಗ್ಗೆ ಯೋಚಿಸುತ್ತೇನೆ. ನಮಗೆ ಯಾವುದೇ ಅವಸರವಿಲ್ಲ. ಏಕೆಂದರೆ ನಾವು ಸಿನಿಮಾ ಮಾಡಿರೋದು ಜನರಿಗೆ. ಜನರೇ ಬಂದು ನೋಡಬೇಕಾದ ಸಿನಿಮಾವನ್ನು ನಾವು ತರಾತುರಿಯಲ್ಲಿ ಬಿಡುಗಡೆ ಮಾಡಿದರೆ ಅದಕ್ಕೆ ಅರ್ಥವಿಲ್ಲ. ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಒಳ್ಳೆಯ ಸಿನಿಮಾವನ್ನು ಜನ ಯಾವತ್ತಿಗೂ ಕೈ ಬಿಟ್ಟಿಲ್ಲ. ಅದು ಯಾವಾಗ ಬಿಡುಗಡೆಯಾದರೂ ಬಂದು ನೋಡಿದ್ದಾರೆ. ಈ ತರಹದ ಒಂದು ಸಂಕಷ್ಟ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ತಿರುಪತಿ ದೇವಾಲಯ ಬಾಗಿಲು ಮುಚ್ಚುತ್ತದೆ ಎಂದು ನಾವು ಕನಸಲ್ಲೂ ಊಹಿಸಿರಲಿಲ್ಲ. ಹೀಗಿರುವಾಗ ನಾವು ಸಿನಿಮಾ ಬಗ್ಗೆ ಈಗಲೇ ಹೆಚ್ಚು ತಲೆಕೆಡಿಸಿಕೊಂಡು ಕೂರೋದು ಸರಿಯಲ್ಲ. ಮುಂದೊಂದು ದಿನ ಎಲ್ಲಾ ಸರಿಯಾಗುತ್ತದೆ. ಚಿತ್ರರಂಗ ಮತ್ತೆ ಕಲರ್‌ಫುಲ್ ಆಗುತ್ತದೆ ಎಂಬ ಆಶಾಭಾವನೆ ಇದೆ. ಆ ನಂತರವೇ ಕೋಟಿಗೊಬ್ಬ 3 ರಿಲೀಸ್ ಮಾಡುತ್ತೇನೆ ಎನ್ನುವುದು ನಿರ್ಮಾಪಕ ಸೂರಪ್ಪ ಬಾಬು ಮಾತು. ಈಗಾಗಲೇ ಕೋಟಿಗೊಬ್ಬ 3 ಚಿತ್ರದ ಹಾಡೊಂದು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.