Advertisement

ದೇಶೀಯ ಕ್ರಿಕೆಟ್‌ಗೆ ಪ್ರೋತ್ಸಾಹ BCCIನಿಂದ ಉತ್ತಮ ನಿರ್ಧಾರ

01:03 AM Apr 18, 2023 | Team Udayavani |

ಕ್ರಿಕೆಟ್‌ ಎಂದರೆ ಸಿರಿವಂತರ ಕ್ರೀಡೆ ಎಂದೇ ಬದಲಾಗಿಬಿಟ್ಟಿದೆ. ಅದರಲ್ಲೂ ಐಪಿಎಲ್‌ ಬಂದ ಮೇಲಂತೂ ಕ್ರಿಕೆಟ್‌ನಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಆಡುತ್ತಿರುವವರಿಗೂ ಕೋಟಿ ಕೋಟಿ ಹಣ ಸಿಗುತ್ತಿದೆ. ಒಂದೊಂದು ಟೂರ್ನಮೆಂಟ್‌ ಗೆದ್ದಾಗಲೂ ಕೋಟಿಗಳ ಲೆಕ್ಕಾಚಾರದಲ್ಲಿ ಪ್ರಶಸ್ತಿ ಹಣ ಸಿಗುತ್ತಿರುವುದು ವಿಶೇಷ.

Advertisement

ಅಂದರೆ ವಿಶ್ವಕಪ್‌, ಚಾಂಪಿಯನ್‌ ಟ್ರೋಫಿ, ಏಷ್ಯಾ ಕಪ್‌ ಸಹಿತ ಇಂಥ ಟೂರ್ನಿಗಳ ಬಹುಮಾನದ ಮೊತ್ತ ಭಾರೀ ಪ್ರಮಾಣದಲ್ಲಿರುತ್ತದೆ. ಇದೇ ವರ್ಷ ಭಾರತದಲ್ಲೇ ನಡೆಯಲಿರುವ ವಿಶ್ವಕಪ್‌ನಲ್ಲಿ ಗೆದ್ದವರಿಗೆ ಸುಮಾರು 32 ಕೋಟಿ ರೂ. ನಗದು ಬಹುಮಾನ ಸಿಗಲಿದೆ. ಹಾಗೆಯೇ ಫೈನಲ್‌ನಲ್ಲಿ ಸೋತವರಿಗೆ ಅಥವಾ 2ನೇ ಸ್ಥಾನ ಪಡೆದವರಿಗೆ ಅರ್ಧದಷ್ಟು ಅಂದರೆ 16 ಕೋಟಿ ರೂ.ಗಳಷ್ಟು ನಗದು ಬಹುಮಾನ ಸಿಗಲಿದೆ. ಆಟಗಾರರಿಗೂ ಭರ್ಜರಿ ರೂಪದಲ್ಲಿ ಹಣ ಸಿಗುವುದು ಗ್ಯಾರಂಟಿ.

ಆದರೆ, ಇದುವರೆಗೆ ಇದ್ದ ದೊಡ್ಡ ಕೊರಗೆಂದರೆ, ದೇಶೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಗೆದ್ದವರಿಗೆ ಸಾಕಷ್ಟು ಹಣ ಸಿಗುತ್ತಿಲ್ಲ ಎಂಬ ಆರೋಪವಿದೆ. ಅಲ್ಲದೆ ಮಹಿಳಾ ಕ್ರಿಕೆಟ್‌ಗೂ ಹೆಚ್ಚಿನ ಹಣ ಸಿಗುತ್ತಿಲ್ಲ ಎಂಬ ನೋವಿದೆ. ಇದನ್ನು ಬಗೆಹರಿಸುವ ಸಂಬಂಧ ಬಿಸಿಸಿಐ ರವಿವಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡು ದೇಶೀಯ ಟೂರ್ನಿಗಳ ಬಹುಮಾನ ಮೊತ್ತವನ್ನು ಏರಿಕೆ ಮಾಡಿದೆ.

ಎಲ್ಲದಕ್ಕಿಂತ ಪ್ರಮುಖವಾಗಿ ಐಪಿಎಲ್‌ ಬಂದ ಮೇಲೆ ರಣಜಿ ಮೇಲಿನ ಆಸಕ್ತಿ ಹೋದಂತಿತ್ತು. ಅಂದರೆ ಒಂದು ಕಾಲದಲ್ಲಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಮಾತ್ರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಈಗ ಕಾಲ ಬದಲಾವಣೆಯಾಗಿ ಐಪಿಎಲ್‌ನಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅಂಥವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುತ್ತಿದೆ.

ಇದನ್ನು ಸರಿಪಡಿಸುವ ಸಲುವಾಗಿ ರಣಜಿ ಟ್ರೋಫಿ ಗೆದ್ದವರಿಗೆ ಇನ್ನು ಮುಂದೆ 5 ಕೋಟಿ ರೂ. ಬಹುಮಾನ ಮೊತ್ತ ನೀಡಲು ನಿರ್ಧರಿಸಲಾಗಿದೆ. ಇದುವರೆಗೆ ಕೇವಲ 2 ಕೋಟಿ ರೂ.ಗಳು ಮಾತ್ರ ಸಿಗುತ್ತಿತ್ತು. ಎರಡನೇ ಸ್ಥಾನ ಪಡೆದವರು ಮೊದಲು ಒಂದು ಕೋಟಿ ರೂ. ಪಡೆಯುತ್ತಿದ್ದರೆ, ಈಗ 3 ಕೋಟಿ ರೂ. ಪಡೆಯಲಿದ್ದಾರೆ. ಹಾಗೆಯೇ ಮಹಿಳಾ ರಣಜಿಯಲ್ಲಿ ಗೆದ್ದವರಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ಮೊದಲಿಗೆ ಕೇವಲ 6 ಲಕ್ಷ ರೂ. ಸಿಗುತ್ತಿತ್ತು. ಇನ್ನು ಇರಾನಿ ಕಪ್‌ನಲ್ಲಿ ಗೆದ್ದವರ ಪ್ರಶಸ್ತಿ ಮೊತ್ತವೂ ಹೆಚ್ಚಳವಾಗಿದೆ. ಗೆದ್ದವರಿಗೆ 50 ಲಕ್ಷ ರೂ. ಸಿಗಲಿದೆ. ವಿಚಿತ್ರವೆಂದರೆ ಇದುವರೆಗೆ ರನ್ನರ್‌ ಅಪ್‌ಗೆ ಯಾವುದೇ ನಗದು ಬಹುಮಾನ ಇರಲಿಲ್ಲ. ಇನ್ನು ಮುಂದೆ 25 ಲಕ್ಷ ರೂ. ಸಿಗಲಿದೆ.  ದುಲೀಪ್‌ ಟ್ರೋಫಿ ಮತ್ತು ವಿಜಯ್‌ ಹಜಾರೆ ಟ್ರೋಫಿ ಗೆದ್ದವರಿಗೆ 1 ಕೋಟಿ ರೂ. ಬಹುಮಾನ, ರನ್ನರ್‌ ಅಪ್‌ಗಳಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ದೀಯೋದರ್‌ ಟ್ರೋಫಿ ವಿಜೇತರಿಗೆ 40 ಲಕ್ಷ, 2ನೇ ಸ್ಥಾನಿಗಳಿಗೆ 20 ಲಕ್ಷ ರೂ., ಸಯದ್‌ ಮುಷ್ತಾಖ್‌ ಅಲಿ ಟ್ರೋಫಿ ಗೆದ್ದವರಿಗೆ 80 ಲಕ್ಷ ರೂ. ರನ್ನರ್‌ ಅಪ್‌ಗಳಿಗೆ 40 ಲಕ್ಷ ರೂ. ಸಿಗಲಿದೆ.

Advertisement

ಈ ಎಲ್ಲ ನಿರ್ಧಾರಗಳು ದೇಶೀಯ ಕ್ರಿಕೆಟ್‌ಗೆ ಇನ್ನಷ್ಟು ಉತ್ತೇಜನ ನೀಡಲಿವೆ ಎಂಬುದು ಬಿಸಿಸಿಐನ ಅಭಿಪ್ರಾಯ. ಇದು ಸತ್ಯ ಕೂಡ. ಭಾರತ ಕ್ರಿಕೆಟ್‌ನಲ್ಲಿ ನಾವು ನೋಡಿರುವ ಎಲ್ಲ ಪ್ರಸಿದ್ಧ ಆಟಗಾರರು ರಣಜಿ ಸಹಿತ ದೇಶೀಯ ಕ್ರಿಕೆಟ್‌ ಮೂಲಕವೇ ಬಂದಿರುವಂಥವರು. ಇತ್ತೀಚಿನ ದಿನಗಳಲ್ಲಿ ಐಪಿಎಲ್‌ ಸದ್ದಾಗಿರಬಹುದು. ಆದರೆ, ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಯುವರಾಜ್‌ ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಸಹಿತ ಪ್ರಸಿದ್ಧ ಆಟಗಾರರೆಲ್ಲರೂ ರಣಜಿಯಂಥ ದೇಶೀಯ ಕ್ರಿಕೆಟ್‌ ಮೂಲಕವೇ ಬಂದವರು. ಅಲ್ಲದೆ, ಈ ಜಮಾನಕ್ಕಿಂತ ಹಿಂದಿನವರೆಲ್ಲರೂ ರಣಜಿ ಸಹಿತ ದೇಶೀಯ ಕ್ರಿಕೆಟ್‌ನವರೇ.

ಹೀಗಾಗಿ, ತಡವಾಗಿಯಾದರೂ, ಬಿಸಿಸಿಐ ರಣಜಿ ಸಹಿತ ದೇಶೀಯ ಕ್ರಿಕೆಟ್‌ನ ಪ್ರೋತ್ಸಾಹಕ್ಕೆ ನಿಂತಿದ್ದು ಸಮಾಧಾನಕರ. ಈ ಮೂಲಕವಾದರೂ ಇನ್ನಷ್ಟು ಆಟಗಾರರು ಹೊರಹೊಮ್ಮಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next