Advertisement
ಕಳೆದ 69 ವರ್ಷಗಳ ಹಿಂದೆ ಕನ್ನಡ ಭಾಷಿಕರು 20 ಆಡಳಿತಗಳಲ್ಲಿ ಹಂಚಿಹೋಗಿದ್ದರು. ಆ ಹೊತ್ತಿಗೆ ಕನ್ನಡಿಗರ ಆಡಳಿತ ಭಾಷೆಯು ಇಂಗ್ಲಿಷ್, ಮರಾಠಿ, ತೆಲುಗು, ಉರ್ದು ಮತ್ತಿತರ ಭಾಷೆಗಳ ನಡುವೆ ಹಂಚಿಹೋಗಿತ್ತು. ವಿವಿಧ ಆಡಳಿತಗಳಿಗೆ ಒಳಪಟ್ಟ ಕನ್ನಡಿಗರ ಸ್ಥಿತಿ ದಯನೀಯವಾಗಿತ್ತು. ಕನ್ನಡವು ಸಾರ್ವಜನಿಕ ಕ್ಷೇತ್ರದಿಂದ ಬಹುತೇಕ ಕಾಣೆಯಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕ ಏಕೀಕರಣ ಚಳವಳಿ ಹುಟ್ಟಿಕೊಂಡು, ಚದುರಿಹೋಗಿದ್ದ ಕನ್ನಡಿಗರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು.
ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅಂದಿನ ಮೈಸೂರು ರಾಜ್ಯವು 1963ರಲ್ಲಿ ಕನ್ನಡ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸಿತು. ಆನಂತರ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬೆಳೆಸಲು ಕರ್ನಾಟಕ ರಾಜಭಾಷಾ ಅಧಿನಿಯಮ 1963, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ 1981 ಮತ್ತು ಕನ್ನಡ ಭಾಷಾ ಕಲಿಕೆ ಅಧಿನಿಯಮ 2015ಗಳನ್ನು ಜಾರಿಗೆ ತಂದಿತು. 1979ರ ವರ್ಷವನ್ನು “ಆಡಳಿತ ಭಾಷಾ ವರ್ಷ’ವನ್ನಾಗಿ ಆಚರಿಸಲಾಯಿತು.
Related Articles
Advertisement
ವಸಾಹತು ಆಡಳಿತ ವಿಧಾನವನ್ನು ಹಾಗೆಯೇ ಮುಂದುವರಿಸಿಕೊಂಡು ಬಂದ ನಮಗೆ ಮೊದಲ ಹಂತದಲ್ಲಿ ಬ್ರಿಟಿಷರು ಬಳಸುತ್ತಿದ್ದ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ಕಂಡುಕೊಳ್ಳಬೇಕಾಯಿತು. ಈ ಹಂತದಲ್ಲಿ ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳಿಗಿಂತ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಆಮದು ಮಾಡಿಕೊಳ್ಳಲಾಯಿತು. ಆಡಳಿತ ಪದಕೋಶಗಳೂ ತಯಾರಾದುವು. ಆದರೆ ಜನ ಬಳಕೆಯಲ್ಲಿಯೇ ಇಲ್ಲದ ಈ ಸಂಸ್ಕೃತ ಪದಗಳು ಆಡಳಿತದೊಳಗೆ ಅಷ್ಟೇನೂ ಜನಪ್ರಿಯವಾಗಲಿಲ್ಲ. ಈ ಪ್ರಕ್ರಿಯೆ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿತು. ಜನರು ಇಂಥ ಅರ್ಥವಾಗದ ಕ್ಲಿಷ್ಟ ಪದಗಳಿಗಿಂತ ಇಂಗ್ಲಿಷ್ ಪದಗಳೇ ವಾಸಿ ಎನ್ನತೊಡಗಿದರು. ಈ ಸಮಸ್ಯೆಯನ್ನು ನಮಗಿನ್ನೂ ಪೂರ್ತಿಯಾಗಿ ಪರಿಹರಿಸಿಕೊಳ್ಳಲಾಗಿಲ್ಲ.
ಭಾಷಾ ಬೆಳವಣಿಗೆಗೆ ಹಿಂದಿ, ಇಂಗ್ಲಿಷ್‌ನಿಂದ ತಡೆಇಷ್ಟಿದ್ದರೂ ಪರಿಸ್ಥಿತಿ ಮೊದಲಿಗಿಂತ ವಾಸಿ ಅನ್ನಬಹುದು. ಏನಿಲ್ಲವೆಂದರೂ ಸುಮಾರು ಶೇಕಡಾ 45ರಷ್ಟು ಕಡೆ ಆಡಳಿತದಲ್ಲಿ ಕನ್ನಡ ಬಳಕೆಯಾಗುತ್ತಿದೆ. ಇದನ್ನು ಶೇಕಡಾ 100ಕ್ಕೆ ಏರಿಸಬೇಕಾಗಿದೆ. ಇದು ಸುಲಭದ ಕೆಲಸವೇನೂ ಅಲ್ಲ. 1990ರ ಆನಂತರ ಕಾಣಿಸಿಕೊಂಡ ಜಾಗತೀಕರಣವು ಮತ್ತೆ ಇಂಗ್ಲಿಷನ್ನೇ ಅನ್ನದ ಭಾಷೆಯನ್ನಾಗಿ ಮಾಡಿದೆ. ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತದೊಳಕ್ಕೆ ಕನ್ನಡ ತರಲು ಬೇಕಾದ ಕಾನೂನಿನ ಬಲ ನಮಗಿಲ್ಲ. ಇಂಗ್ಲಿಷಿನ ಜತೆಗೆ ಹಿಂದಿಯೂ ಕನ್ನಡದ ಬೆಳವಣಿಗೆಗೆ ತಡೆಯಾಗಿದೆ. ಬ್ಯಾಂಕ್, ರೈಲ್ವೇ, ಅಂಚೆ ಕಚೇರಿ ಮೊದಲಾದ ಕೇಂದ್ರ ಸರಕಾರದ ಕಚೇರಿಗಳಲ್ಲಿ ಕನ್ನಡವನ್ನು ಅಳವಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಆಡಳಿತದ ಒಳಗೆ ಬರುತ್ತಿರುವವರು ಇಂಗ್ಲಿಷ್ ಓದಿದವರೇ ಆಗಿರುವುದರಿಂದ ಅವರೇನೂ ಕನ್ನಡವನ್ನು ಹೃದಯದ ಭಾಷೆಯಾಗಿರಿಸಿಕೊಂಡು ಕೆಲಸ ಮಾಡುತ್ತಿಲ್ಲ. ಕೆಪಿಎಸ್‌ಸಿ ಪರೀಕ್ಷೆ ಬರೆದು ಆಡಳಿತಕ್ಕೆ ಬರುವವರ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿಯೇ ಓದುತ್ತಿದ್ದಾರೆ. ಈ ಸಂಕೀರ್ಣ ಪರಿಸ್ಥಿತಿಯನ್ನು ಬಗೆಹರಿಸಲು ನಾವೆಲ್ಲ ಬಹಳ ಕೆಲಸ ಮಾಡಬೇಕಾಗಿದೆ. ಸಲಹೆ ಕೊಡಬಹುದು, ಅಷ್ಟೇ…
ಇವತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಂದೆ ಅನೇಕ ಸವಾಲುಗಳಿವೆ. ಪ್ರಾಧಿಕಾರದ ಅಧಿನಿಯಮ -19ರ ಪ್ರಕಾರ ಆಡಳಿತದಲ್ಲಿ ಕನ್ನಡ ಬಳಸದ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸಲಹೆ ಮಾಡುವ ಅಧಿಕಾರವಷ್ಟೇ ಪ್ರಾಧಿಕಾರಕ್ಕಿದೆ. ಕಾನೂನು ಕ್ರಮ ಕೈಗೊಳ್ಳುವ ಅಧಿ ಕಾರವಿಲ್ಲ. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರಕಾರವನ್ನು ಹೆಚ್ಚು ದೂರಿಯೂ ಪ್ರಯೋಜನವಿಲ್ಲ. ಸರಕಾರವು ಕನ್ನಡ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ಮಾಡಿದೆ. ಆದರೆ ಸಮಿತಿಯವರು ಕೆಲಸ ಮಾಡಬೇಕಲ್ಲ? ಕನ್ನಡ ಜನರಿಗೇ ಬೇಡವಾದರೆ, ಪ್ರಾಧಿಕಾರ ಎಷ್ಟು ಕೆಲಸ ಮಾಡಬಹುದು? ಸ್ಪಂದಿಸುವ/ ಸ್ಪಂದಿಸದ ಅಧಿಕಾರಿ ವರ್ಗ
ಕೆಲವೆಡೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ರಾಜ್ಯ ಸರಕಾರದ ಕಚೇರಿಗಳಲ್ಲಿ ಕನ್ನಡದ ಆಡಳಿತ ಹೆಚ್ಚಾ ಕಡಿಮೆ ಸದೃಢ ಸ್ಥಿತಿಯಲ್ಲಿದೆ. ಭಾರತೀಯ ಆಡಳಿತ ಸೇವೆಗೆ ಸೇರಿದ ಬಹುಪಾಲು ಅಧಿಕಾರಿಗಳಲ್ಲಿಯೂ ಕನ್ನಡದ ಕುರಿತಂತೆ ಸಕಾರಾತ್ಮಕ ಮನೋಭಾವ ಮೂಡಿದೆ. ಆದರೆ ಎಲ್ಲ ಅಧಿಕಾರಿಗಳೂ ಹಾಗೇ ಇದ್ದಾರೆಂದು ಹೇಳಲು ಬರುವುದಿಲ್ಲ. ಟಿಪ್ಪಣಿಗಳನ್ನು ಕನ್ನಡದಲ್ಲಿ ದಾಖಲಿಸಲು ಅಶಕ್ತರಾಗಿರುವ, ಅನ್ಯಮನಸ್ಕರಾ ಗಿರುವ ಅಖಿಲ ಭಾರತ ಸೇವೆಗೆ ಸೇರಿದ ಕೆಲವು ಅಧಿಕಾರಿಗಳನ್ನೂ ನಾವು ಕಾಣಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಂಥವರ ಕುರಿತು ಯಾವುದೇ ಸಹಾನುಭೂತಿಯನ್ನು ತೋರುವುದಿಲ್ಲವೆನ್ನುವುದನ್ನು ಈಗಾಗಲೇ ಸಾಬೀತುಪಡಿಸಿದೆ. ಕಳೆದ ಬಾರಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾಗ ಈ ರೀತಿಯ ಕನ್ನಡ ವಿರೋಧಿ ಧೋರಣೆ ಹೊಂದಿದ ಅಧಿಕಾರಿಯೊಬ್ಬರ ವಿರುದ್ಧ ಪ್ರಾಧಿಕಾರ ಕ್ರಮಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ ಅವರನ್ನು ಕೇಂದ್ರ ಸೇವೆಗೆ ಹಿಂದಿರುಗಿಸಿದ್ದರು. ಅನ್ಯಾಯವಾದಾಗ ಪ್ರತಿಭಟಿಸಲೇಬೇಕು
ಇದು ರಾಜ್ಯ ಸರಕಾರದ ಕಚೇರಿಗಳ, ಸಂಸ್ಥೆಗಳ ವಿಷಯವಾದರೆ ಕೇಂದ್ರ ಸರಕಾರದ ಕಚೇರಿಗಳಲ್ಲಿ, ಕೇಂದ್ರೋದ್ಯಮಗಳಲ್ಲಿ, ಬ್ಯಾಂಕ್‌ಗಳಲ್ಲಿನ ಸ್ಥಿತಿಗತಿ ಗಮನಿಸಿದರೆ ವಿಷಾದವೇ ಫಲಿತಾಂಶವಾಗುತ್ತದೆ. ಇದಕ್ಕೆ ತ್ರಿಭಾಷಾ ನೀತಿ ಬಹಳ ದೊಡ್ಡ ಅಡತಡೆಯಾಗಿದೆ. ಇತ್ತೀಚೆಗೆ ದಕ್ಷಿಣ ಭಾರತಕ್ಕೆ ಸೇರಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸ್ಥಳೀಯ ಭಾಷೆಯನ್ನು ಬಲ್ಲ ಸಿಬಂದಿ ಮಾತ್ರ ಸಾರ್ವಜನಿಕ ಸಂಪರ್ಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದರು. ಈ ವಿಷಯದಲ್ಲಿ ಎಲ್ಲ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಸ್ಥಳೀಯ ಬ್ಯಾಂಕರ್ ಸಮಿತಿಗಳಿಗೆ ತುರ್ತು ಸೂಚನೆ ನೀಡಲು ಆಗ್ರಹಿಸಿದ್ದೇನೆ. ಆ ಕೆಲಸವೂ ಇದೀಗ ನಡೆಯುತ್ತಿದೆ. ಕನ್ನಡ ಆಡಳಿತ ಭಾಷೆಯಾಗಿ, ಈ ನೆಲದ ಸಾರ್ವಭೌಮ ಭಾಷೆಯಾಗಿ ವಿಜೃಂಭಿಸಬೇಕಾದಲ್ಲಿ, ಮೂಲಭೂತ ಬದಲಾವಣೆಗಳಿಗೆ ನಾವು ಆದ್ಯತೆ ನೀಡಬೇಕು. ನಮ್ಮ ಮಕ್ಕಳು ಕನಿಷ್ಠ ಐದು ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಬೇಕು. ಕನ್ನಡ ಸಂಸ್ಕೃತಿಯ ಕುರಿತು ಹೆಮ್ಮೆಪಡಬೇಕು. ಸಾರ್ವಜನಿಕರು, ಕೇಂದ್ರ ಸರಕಾರದ, ಕೇಂದ್ರೋದ್ಯಮಗಳ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕನ್ನಡಿಗರು ನಮ್ಮ ಭಾಷೆಗೆ ಅನ್ಯಾಯವಾಗುತ್ತಿದೆಯೆನ್ನುವ ಸಂದರ್ಭ ಗಮನಿಸಿದಾಗ ಪ್ರತಿಭಟಿಸಬೇಕು. ನ್ಯಾಯಾಲಯ, ಶಿಕ್ಷಣ, ಮತ್ತು ಮಾಧ್ಯಮ ಕ್ಷೇತ್ರಗಳು ಕನ್ನಡದ ಪರವಾಗಿ ನಿಲ್ಲಬೇಕು. ಹೀಗಾದರೆ ಕನ್ನಡ ಮುಂದಿನ ದಿನಗಳಲ್ಲಿ ಪತನಮುಖೀಯಾಗದೇ ಉಳಿಯಲು ಹೇಗೆ ಸಾಧ್ಯವಿದೆ ಎಂದು ನಾಡಿನ ಜನ ಗಂಭೀರವಾಗಿ ಆಲೋಚಿಸಬೇಕಾದ ಸಂದರ್ಭ ಇದು. ಆಗಬೇಕಾದ್ದೇನು?
1. ಮಕ್ಕಳು ಕನಿಷ್ಠ ಐದನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿಯೇ ಓದಬೇಕು.
2. ಈಗ ಶೇ.45ರಷ್ಟಿರುವ ಆಡಳಿತದಲ್ಲಿ ಕನ್ನಡ ಬಳಕೆಯನ್ನು ಶೇ. 100ಕ್ಕೇರಿಸಬೇಕಾಗಿದೆ.
3. ಕಂಪೆನಿಗಳ ಆಡಳಿತದೊಳಕ್ಕೆ ಕನ್ನಡ ತರಲು ಬೇಕಾದ ಕಾನೂನಿನ ಬಲ ಬೇಕಾಗಿದೆ.
4. ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಬೇಕಿದೆ.
5. ಅನ್ಯಾಯವಾದಾಗ ಪ್ರತಿಭಟಿಸುವ ಮನೋ ಭಾವವನ್ನು ಎಲ್ಲ ಕನ್ನಡಿಗರೂ ಬೆಳೆಸಿಕೊಳ್ಳಬೇಕು. – ಡಾ| ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ