ಪಣಜಿ: ಗೋವಾ ಸರಕಾರವು ತನ್ನ ಸ್ವಂತ ಮ್ಯೂಸಿಕ್ ಫೆಸ್ಟಿವಲ್‍ನ್ನು ಡಿಸೆಂಬರ್ 26 ರಿಂದ 31 ರ ವರೆಗೆ ಆಯೋಜಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ಗೋವಾದಲ್ಲಿ ಸನ್‍ಬರ್ನ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿರುವುದಿಲ್ಲ ಎಂದು ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಹೇಳಿದ್ದಾರೆ.
ಪ್ರತಿ ವರ್ಷ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ರಾಜ್ಯದ ವಿವಿಧೆಡೆ ಸಂಗೀತೋತ್ಸವಗಳನ್ನು ಆಯೋಜಿಸಲಾಗಿದೆ. ಈ ಹಿಂದೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಸನ್‍ಬರ್ನ ಫೆಸ್ಟಿವಲ್‍ನ್ನು ಗೋವಾದಲ್ಲಿ ಮತ್ತೆ ಆಯೋಜಿಸುವ ಉದ್ದೇಶದಿಂದ ಸಂಸ್ಥೆ ಟಿಕೆಟ್ ಮಾರಾಟ ಆರಂಭಿಸಿದೆ.
ಈ ಕುರಿತಂತೆ ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ರೋಹನ್ ಖಂವಟೆ, ಗೋವಾದಲ್ಲಿ ಸನ್ ಬರ್ನ್ ಫೆಸ್ಟಿವಲ್ ಆಯೋಜಿಸಲು ಇದುವರೆಗೂ ಯಾರೂ ಕೂಡ ಸನ್‍ಬರ್ನ್ ಆಯೋಜಕರು ಪರವಾನಗಿ ಪಡೆದುಕೊಳ್ಳಲು ಮುಂದೆ ಬಂದಿಲ್ಲ. ಗೋವಾ ರಾಜ್ಯ ಸರ್ಕಾರವು ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಮೂಜಿಕ್ ಫೆಸ್ಟಿವಲ್ ಆಯೋಜಿಸಲು ನಾವು ವಿಚಾರ ನಡೆಸುತ್ತಿದ್ದೇವೆ. ಸರ್ಕಾರದ ವತಿಯಿಂದ ಮ್ಯೂಜಿಕ್ ಫೆಸ್ಟಿವಲ್ ಆಯೋಜಿಸಿದರೆ ಸನ್‍ಬರ್ನ್ ಫೆಸ್ಟಿವಲ್ ಆಯೋಜನೆಗೆ ಸ್ಥಳಾವಕಾಶವಿರುವುದಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮ್ಯೂಜಿಕ್ ಫೆಸ್ಟಿವಲ್ ಆಯೋಜನೆಯಾದರೆ ಸನ್ ಬರ್ನ್
ನಂತಹ ಸಂಸ್ಥೆಗೆ ರಾಜ್ಯದಲ್ಲಿ ಮ್ಯೂಜಿಕ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿರುವುದಿಲ್ಲ. ಗೋವಾದಲ್ಲಿ ಯಾರೇ ಇಂತಹ ಫೆಸ್ಟಿವಲ್ ಆಯೋಜಿಸಲು ಬಯಸಿದರೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪೂರ್ವಾನುಮತಿ ಅಗತ್ಯವಾಗಿರುತ್ತದೆ ಎಂದು ಸಚಿವ ರೋಹನ್ ಖಂವಟೆ ಹೇಳಿದರು.