ಶುಕ್ರವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಎಸ್ಪಿ ಸಂಸದರು ಘೋಷಣೆ ಕೂಗುತ್ತ ಸದನ ಬಾವಿಗೆ ಬಂದರು. ಹಾಗಾಗಿ, ಪ್ರಶ್ನೋತ್ತರ ಅವಧಿಯಲ್ಲಿ 2 ಪ್ರಶ್ನೆ ಗಳಿಗೆ ಮಾತ್ರವೇ ಉತ್ತರ ಪಡೆಯಲು ಸಾಧ್ಯವಾಯಿತು. ಪರಿಣಾಮ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು 12 ಗಂಟೆಗೆ ಮುಂದೂಡಿದರು. ಮತ್ತೆ ಸದನ ಸಭೆ ಸೇರಿದಾಗ ಗದ್ದಲ ಮುಂದುವರಿದಿದ್ದರಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದೇ ಪರಿಸ್ಥಿತಿ ರಾಜ್ಯಸಭೆಯಲ್ಲೂ ಇತ್ತು.
Advertisement
ಅಸ್ತ್ರವಾಗಿರುವ ನಿಲುವಳಿ ಸೂಚನೆ ಗೊತ್ತುವಳಿ: ನಿಯಮ 267ರ ಅಡಿ ನೀಡಲಾಗುವ ನಿಲುವಳಿ ಸೂಚನೆ ಗೊತ್ತುವಳಿಯನ್ನು ಸದನ ನಡೆಯದಂತೆ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಾನಿ ಲಂಚ ಪ್ರಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗೆ ವಿಪಕ್ಷದ ನಾಯಕರು ನೀಡಿದ್ದ 16 ನಿಲುವಳಿ ಸೂಚನೆ ಗೊತ್ತುವಳಿಗಳನ್ನು ತಿರಸ್ಕರಿಸುವುದಾಗಿ ಅವರು ಪ್ರಕಟಿಸುತ್ತಿದ್ದಂತೆ ಮತ್ತೆ ಗದ್ದಲ ಶುರುವಾಯಿತು. ಬಳಿಕ ಸದನವನ್ನು ಮುಂದೂಡಲಾಯಿತು.
ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಉದ್ಯಮಿ ಗೌತಮ್ ಅದಾನಿ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿ ಅಮೆರಿಕ ಸರಕಾರ ವಾರಂಟ್ ಹೊರಡಿಸಿದ ಬಗ್ಗೆ ಮಾಹಿತಿ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಅವರ ವಿರುದ್ಧ ಸಮನ್ಸ್ ಅಥವಾ ವಾರಂಟ್ ನೀಡಿದ ಅಮೆರಿಕ ಸರಕಾರ ಮಾಹಿತಿ ನೀಡಿಲ್ಲ ಎಂದರು. ಈ ಪ್ರಕರಣ ಖಾಸಗಿ ಸಂಸ್ಥೆ, ವ್ಯಕ್ತಿಗಳು ಹಾಗೂ ಅಮೆರಿಕ ನ್ಯಾಯಾಂಗ ಇಲಾಖೆ ನಡುವಿನ ವಿಚಾರ. ಅದರಲ್ಲಿ ಸರಕಾರದ ಪಾತ್ರವಿಲ್ಲ. ಅದಾನಿ ಪ್ರಕರಣದಲ್ಲಿ ಯಾವುದೇ ಮುನ್ಸೂಚನೆಯೂ ಇರಲಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆಗೆ ಪ್ರಿಯಾಂಕಾ ಸಾಥ್
ಹೊಸದಿಲ್ಲಿ: ಸಂಸದೆಯಾಗಿ ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರು ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಉತ್ತರಪ್ರದೇಶದ ಸಂಭಲ್ನಲ್ಲಿ ನಡೆದ ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್, ಸಮಾಜವಾದಿ ಪಕ್ಷದ ನಾಯಕರಿಗೆ ಬೆಂಬಲವಾಗಿ ಪ್ರಿಯಾಂಕಾ ಅವರೂ ತಮ್ಮ ಆಸನದ ಮುಂದೆ ಎದ್ದು ನಿಂತಿದ್ದು ಕಂಡುಬಂತು. ಅಲ್ಲದೆ ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ವಿಪಕ್ಷಗಳ ಇತರ ನಾಯಕರನ್ನೂ ಭೇಟಿಯಾದ ಪ್ರಿಯಾಂಕಾ, ಪರಸ್ಪರ ಕುಶಲೋಪರಿ ವಿಚಾರಿಸಿದರು.