ಗೋವಾ ವಿಮೋಚನಾ ದಿನ (ಡಿಸೆಂಬರ್ 19) ಭಾರತೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಹೌದು ಯಾಕೆಂದರೆ 1947ರ ಆಗಸ್ಟ್ 15ರಂದು ಬ್ರಿಟಿಷ್ ವಸಾಹತುಶಾಹಿಯಿಂದ ಮುಕ್ತಗೊಂಡು ಭಾರತ ಸ್ವತಂತ್ರವಾಗಿತ್ತು. ಆದರೆ ಪೋರ್ಚುಗೀಸರು ಮಾತ್ರ ನಮ್ಮ ಗೋವಾವನ್ನು ಬಿಟ್ಟುಕೊಡಲು ಸಿದ್ಧರಿಲ್ಲವಾಗಿತ್ತು.
ಗೋವಾದ ಸ್ವಾತಂತ್ರ್ಯಕ್ಕಾಗಿ ಭಾರತ ಹೋರಾಟ ನಡೆಸಿದ್ದರು ಕೂಡಾ ಅದು ಫಲಪ್ರದವಾಗಿರಲಿಲ್ಲ. ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದವು. ಕೊನೆಗೆ ಭಾರತ ಸರ್ಕಾರ ಸೇನೆಯನ್ನು ಬಳಸಿ ಗೋವಾವವನ್ನು ವಶಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿತ್ತು.
ಇದನ್ನೂ ಓದಿ:Corruption Case: ತಮಿಳುನಾಡು ಸಚಿವ ಕೆ.ಪೊನ್ಮುಡಿ ದೋಷಿ…: ಮದ್ರಾಸ್ ಹೈಕೋರ್ಟ್ ತೀರ್ಪು
ಯೋಜನೆಯಂತೆ ಭಾರತ 1961ರ ಡಿಸೆಂಬರ್ 18ರಂದು ಭೂ, ನೌಕಾಪಡೆ ಮತ್ತು ವಾಯುಪಡೆ ಮೂಲಕ ಗೋವಾದ ಮೇಲೆ ದಾಳಿ ನಡೆಸಿತ್ತು. ಆದರೆ ಗೋವಾದ ಹಿಡಿತ ಬಿಟ್ಟುಕೊಡಲು ಸಿದ್ಧರಿಲ್ಲದ ಪೋರ್ಚುಗೀಸರು ಕೊನೆಯ ಅಸ್ತ್ರ ಎಂಬಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲಕ್ಕೆ ಅಂಗಲಾಚಿ ವಿಶ್ವಸಂಸ್ಥೆ ಮೊರೆ ಹೋಗಿತ್ತು.
ಪೋರ್ಚುಗೀಸ್ ಗೆ ಬ್ರಿಟನ್, ಅಮೆರಿಕ ಬೆಂಬಲ!
ಭಾರತ ಕೂಡಲೇ ಗೋವಾದಲ್ಲಿ ಕಾರ್ಯಾಚರಣೆಗೆ ನಿಯೋಜಿಸಿದ್ದ ಸೇನಾಪಡೆಗಳನ್ನು ಹಿಂಪಡೆಯಬೇಕೆಂದು ಪೋರ್ಚುಗೀಸ್ ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಬ್ರಿಟನ್, ಅಮೆರಿಕ ಮತ್ತು ಫ್ರಾನ್ಸ್ ಬೆಂಬಲ ಸೂಚಿಸಿದ್ದವು. ಆದರೆ ಪೋರ್ಚುಗೀಸ್ ನ ಈ ನಿರ್ಣಯವನ್ನು ರದ್ದುಗೊಳಿಸಲು ಅಂದಿನ ಯುಎಸ್ ಎಸ್ ಆರ್, ಲಿಬೇರಿಯಾ, ಶ್ರೀಲಂಕಾ, ಯುನೈಟೆಡ್ ಅರಬ್ ರಿಪಬ್ಲಿಕ್ ಬೆಂಬಲ ನೀಡಿದ್ದವು.
ಪೋರ್ಚುಗಲ್ ನಿರ್ಣಯಕ್ಕೆ ದಕ್ಷಿಣ ಅಮೆರಿಕದ ಈಕ್ವೆಡಾರ್, ಚಿಲಿ, ಬ್ರೆಜಿಲ್ ಮತ್ತು ಚೀನಾ ಕೂಡಾ ಬೆಂಬಲ ಘೋಷಿಸಿದ್ದವು. ಆಂಗೋಲಾ ಸ್ವಾತಂತ್ರ್ಯ ಚಳವಳಿಯನ್ನು ಪೋರ್ಚುಗಲ್ ಹತ್ತಿಕ್ಕಿದೆ ಎಂದು ಯುಎಸ್ ಎಸ್ ಆರ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ 1961ರ ಡಿಸೆಂಬರ್ 18ರಂದು ಭಾರತದ ವಿರುದ್ಧದ ಪ್ರಸ್ತಾವಿತ ವಿಶ್ವಸಂಸ್ಥೆಯ ನಿರ್ಣಯವನ್ನು ಮಂಡಿಸುವ ಕೆಲವು ತಿಂಗಳ ಮೊದಲು ನೆರೆಯ ಕ್ಯೂಬಾವನ್ನು ಅತಿಕ್ರಮಿಸಲು ವಿಫಲವಾದ ಅಮೆರಿಕದ ನೈತಿಕತೆಯ ಹಕ್ಕನ್ನು ಯುಎಸ್ ಎಸ್ ಆರ್ ಪ್ರಶ್ನಿಸಿತ್ತು.
450 ವರ್ಷಗಳಿಂದ ಗೋವಾ ಪೋರ್ಚುಗೀಸ್ ಹಿಡಿತದಲ್ಲಿರುವುದಾಗಿ ಪೋರ್ಚುಗಲ್ ಹಕ್ಕನ್ನು ಮಂಡಿಸಿತ್ತು. ಆದರೂ ಯುಎಸ್ ಎಸ್ ಆರ್, ಗೋವಾ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಭೌಗೋಳಿಕವಾಗಿ ಹಾಗೂ ಇತಿಹಾಸ, ಸಂಸ್ಕೃತಿ, ಸಂಪ್ರದಾಯದ ಅಂಶಗಳನ್ನು ಎತ್ತಿಹಿಡಿಯುವ ಮೂಲಕ ವಿಶ್ವಸಂಸ್ಥೆಗೆ ತಿರುಗೇಟು ನೀಡಿತ್ತು.
ಆಪರೇಷನ್ ವಿಜಯ್!
ವಿಶ್ವಸಂಸ್ಥೆಯಲ್ಲಿ ಪೋರ್ಚುಗಲ್ ಪ್ರಸ್ತಾಪಿಸಿದ ನಿರ್ಣಯವನ್ನು ಯುಎಸ್ ಎಸ್ ಆರ್ ತನ್ನ ವಿಟೋ ಅಧಿಕಾರವನ್ನು ಬಳಸಿ ರದ್ದುಗೊಳಿಸುವಲ್ಲಿ ನೆರವು ನೀಡಿತ್ತು. ಈ ಮೂಲಕ 1961ರ ಡಿಸೆಂಬರ್ 19ರಂದು ಭಾರತದ ಸೇನೆ ಆಪರೇಶನ್ ವಿಜಯ್ ಹೆಸರಿನಲ್ಲಿ ದಾಳಿ ನಡೆಸಿ ಪೋರ್ಚುಗೀಸ್ ಯುದ್ಧ ನೌಕೆಯನ್ನು ನಾಶಗೊಳಿಸಿ, ಯಾವುದೇ ರಕ್ತಪಾತವಿಲ್ಲದೇ ಗೋವಾವನ್ನು ವಶಕ್ಕೆ ಪಡೆದಿತ್ತು.
ಭಾರತದ ಸೇನಾ ಕಾರ್ಯಾಚರಣೆಯಲ್ಲಿ ಪೋರ್ಚುಗೀಸರು ಶರಣಾದ ನಂತರ ಪೋರ್ಚುಗೀಸ್ ಗವರ್ನರ್ ಜನರಲ್ ವಾಸಾಲೋ ಡಿಸಿಲ್ವಾ ಭಾರತೀಯ ಸೈನ್ಯದ ಬ್ರಿಗೇಡಿಯರ್ ಕೆ.ಎಸ್. ಧಿಲ್ಲನ್ ಅವರಿಗೆ ಅಧಿಕೃತವಾಗಿ ಶರಣಾಗತಿ ಪತ್ರ ಬರೆದುಕೊಡುವ ಮೂಲಕ ಗೋವಾ ಪೋರ್ಚುಗೀಸರಿಂದ ವಿಮೋಚನೆ ಕಂಡಿತ್ತು.
ಆಜಾದ್ ಗೋಮಾಂತಕ್ ದಳ:
1947ರ ಜೂನ್ 18ರಂದು ಆಜಾದ್ ಗೋಮಾಂತಕ್ ದಳ ಜನ್ಮತಳೆದಿತ್ತು. ಇದು ಗೋವಾದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಏಳು ಜನ ತರುಣರ ಸಂಘಟನೆಯಾಗಿತ್ತು. ಸಿನಾರಿ ದತ್ತಾತ್ರೇಯ ದೇಶಪಾಂಡೆ, ಬೇಟು ನಾಯ್ಕ್, ತುಕಾರಾಂ ಕಾನ್ಕೋಕರ್, ಜೈವಂತ್, ನಾರಾಯಣ ನಾಯ್ಕ್ ಮತ್ತು ವಿಶ್ವನಾಥ್ ಲಾವಂಡೆ ಸೇರಿ ಏಳು ಮಂದಿ ಯುವಕರು ಮರ್ಡೊಲ್ ಸಮೀಪದ ಕುಂಕೋಲಿಯಮ್ ನಲ್ಲಿರುವ ಶ್ರೀಶಾಂತದುರ್ಗಾ ದೇವಸ್ಥಾನದಲ್ಲಿ ಗೆರಿಲ್ಲಾ ತಂತ್ರದ ಮೂಲಕ ಗೋವಾ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದರು. ಗೋವಾ ವಿಮೋಚನೆ ಹೋರಾಟದಲ್ಲಿ ಹಲವು ಮಂದಿ ಹುತಾತ್ಮರಾಗಿದ್ದರು. ಅವರನ್ನು ಪ್ರತಿವರ್ಷ ಡಿಸೆಂಬರ್ 19ರಂದು ಸ್ಮರಿಸಿಕೊಳ್ಳಲಾಗುತ್ತಿದೆ.