ಪಣಜಿ: ಎಂಟು ಮಂದಿ ಕಾಂಗ್ರೆಸ್ ಶಾಸಕರ ಗುಂಪು ಬಿಜೆಪಿಯೊಂದಿಗೆ ವಿಲೀನಕ್ಕೆ ವಿಧಾನಸಭಾಧ್ಯಕ್ಷ ರಮೇಶ್ ತವಡಕರ್ ಅನುಮೋದನೆ ನೀಡಿದ್ದಾರೆ. ಅನುಮೋದನೆಯ ನಂತರ, ದಿಗಂಬರ್ ಕಾಮತ್, ಮೈಕೆಲ್ ಲೋಬೋ ಸೇರಿದಂತೆ ಒಟ್ಟು ಎಂಟು ಜನ ಕಾಂಗ್ರೆಸ್ ಶಾಸಕರು ಅಂತಿಮವಾಗಿ ಅಧಿಕೃತವಾಗಿ ಬಿಜೆಪಿ ಸರ್ಕಾರದೊಂದಿಗೆ ವಿಲೀನಗೊಂಡಂತಾಗಿದೆ.
ಬುಧವಾರ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಆದರೆ ಸ್ಪೀಕರ್ ತವಡ್ಕರ್ ಬುಧವಾರ ಗೋವಾದಲ್ಲಿ ಇಲ್ಲದ ಕಾರಣ, ಅನುಮೋದನೆ ಬಾಕಿ ಉಳಿದಿತ್ತು.
ಕಳೆದ ಕೆಲವು ದಿನಗಳಿಂದ ಬಿಜೆಪಿ ‘ಮಿಷನ್ ಕಮಲ’ ಕಾರ್ಯಾಚರಣೆ ಮೂಲಕ ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಅಭಿಯಾನ ನಡೆಸುತ್ತಿರುವಾಗಲೇ ರಾಜ್ಯದಲ್ಲಿ ”ಕಾಂಗ್ರೆಸ್ ಬಿಟ್ಟು ತೊಲಗಿ” ಚಳವಳಿ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.
ಜುಲೈ ೧೦ ರಂದು ವಿಧಾನಸಭೆಯ ಮುಂಗಾರು ಅಧಿವೇಶನದ ಸಂದರ್ಭದಲ್ಲಿಯೇ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದರು. ಆದರೆ ಬಿಜೆಪಿಗೆ ಇನ್ನೂ ಇಬ್ಬರು ಶಾಸಕರ ಅಗತ್ಯವಿತ್ತು. ಹಾಗಾಗಿ ಆರಂಭಿಸಿದ ಮಿಷನ್ ಕಮಲ ಯಶಸ್ವಿಯಾಗಿರಲಿಲ್ಲ. ಆದಾಗ್ಯೂ, ಈ ಆಪರೇಷನ್ ಕಮಲ ನಂತರವೂ ಮುಂದುವರೆಯಿತು. ಅಂತಿಮವಾಗಿ ಇದೀಗ ಆಪರೇಶನ್ ಕಮಲ ಯಶಸ್ವಿಯಾಗಿದೆ. ಮುರಗಾಂವ್ ಶಾಸಕ ಸಂಕಲ್ಪ್ ಅಮೋಣ್ಕರ್ ಮತ್ತು ಸಾಂತಾಕ್ರೂಜ್ ಶಾಸಕ ರುಡಾಲ್ಫ್ ಫೆರ್ನಾಂಡಿಸ್ ಅವರು ಒಪ್ಪಿಗೆ ನೀಡಿದ ನಂತರ, ‘ಮಿಷನ್ ಕಮಲ’ ಯಶಸ್ವಿಯಾಗಿದೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪಕ್ಷದ ವಿಲೀನದ ಪ್ರಸ್ತಾಪವನ್ನು ಅಂಗೀಕರಿಸಿದ ನಂತರ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ವಿವರವಾಗಿ ಚರ್ಚೆ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ನಂತರ ಈ ಕುರಿತ ಪ್ರಸ್ತಾವನೆಯನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಲಾಗಿದೆ. ಆದರೆ ಸ್ಪೀಕರ್ ರಮೇಶ್ ತಾವಡ್ಕರ್ ದೆಹಲಿಯಲ್ಲಿದ್ದರು, ಘಟನೆಯ ಮಾಹಿತಿ ಸಿಕ್ಕ ತಕ್ಷಣ ಅವರು ಗೋವಾಕ್ಕೆ ಆಗಮಿಸಿ ಅನುಮೋದನೆ ನೀಡಿದ್ದಾರೆ.