ಹೊಸದಿಲ್ಲಿ/ಪಣಜಿ: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿ ರುವ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಅವರ ಸರಕಾರವನ್ನು ಉರುಳಿಸುವ ತಂತ್ರಗಾರಿಕೆ ಮಾಡುತ್ತಿದ್ದ ಕಾಂಗ್ರೆಸ್‌ಗೆ ದೊಡ್ಡ ಶಾಕ್ ನೀಡಿರುವ ಬಿಜೆಪಿ ಇಬ್ಬರು ಶಾಸಕರನ್ನು ಬಿಜೆಪಿಗೆ ಸೆಳೆದಿದೆ. ಶಾಸಕತ್ವಕ್ಕೆ ರಾಜೀನಾಮೆ ನೀಡಿರುವ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ ಸೋಪ್ಟೆ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ ಗೋವಾ ಅಸೆಂಬ್ಲಿಯ ಒಟ್ಟಾರೆ ಬಲ 38ಕ್ಕೆ ಕುಸಿದಿದೆ. ಸದ್ಯ 23 ಶಾಸಕರ ಬೆಂಬಲ ಹೊಂದಿರುವ ಮನೋಹರ್ ಪಾರೀಕರ್ ಅವರ ಸರಕಾರಕ್ಕೆ ಈ ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ ಮತ್ತಷ್ಟು ಬಲ ಬಂದಂತಾಗಿದೆ. ಇದೀಗ ಕಾಂಗ್ರೆಸ್ ಬಲ 14ಕ್ಕೆ ಇಳಿದಿದ್ದು, ಇದುವರೆಗೆ ತಾವೇ ಅಸೆಂಬ್ಲಿಯಲ್ಲಿ ದೊಡ್ಡ ಪಕ್ಷ ಎಂದು ಹೇಳುತ್ತಿದ್ದ ಅವಕಾಶವನ್ನು ಕಳೆದುಕೊಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರ್ರಿಕರ್ ಅವರು, ದಿನ ನಿತ್ಯದ ಆಡಳಿತದಲ್ಲಿ ಭಾಗಿಯಾಗಿರಲಿಲ್ಲ. ಇದನ್ನೇ ದಾಳ ವಾಗಿರಿಸಿಕೊಂಡಿದ್ದ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಕೈ ಹಾಕಿತ್ತು. ಅಲ್ಲದೆ, ಸ್ವತಂತ್ರ ಶಾಸಕರು ಮತ್ತು ಗೋವಾ ಸರಕಾರದಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಮತ್ತು ಗೋವಾ ಫಾರ್ವರ್ಡ್ ಬ್ಲಾಕ್ ಪಾರ್ಟಿ ಬೆಂಬಲ ಗಳಿಸಲೂ ಯತ್ನಿಸಿತ್ತು. ಇದನ್ನು ಮನ ಗಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಬುಟ್ಟಿಗೇ ಕೈ ಹಾಕಿದ್ದು ಇಬ್ಬರು ಶಾಸಕರಿಂದ ರಾಜೀ ನಾಮೆ ನೀಡಿಸಿ ಪಕ್ಷಕ್ಕೆ ಸೆಳೆದಿದ್ದಾರೆ. ಇದಷ್ಟೇ ಅಲ್ಲ, ಇನ್ನೂ ಹಲವಾರು ಶಾಸಕರು ಬಿಜೆಪಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಲಾಗಿದೆ. ಸ್ವತಃ ದಯಾನಂದ ಸೋಪ್ಟೆ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಎರಡರಿಂದ ಮೂರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ಸ್ವೀಕಾರ: ಸೋಪ್ಟೆ ಮತ್ತು ಶಿರೋಡ್ಕರ್ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ ಎಂದು ಗೋವಾ ಅಸೆಂಬ್ಲಿ ಸ್ಪೀಕರ್ ಪ್ರಮೋದ್ ಸಾವಂತ್ ಹೇಳಿದ್ದಾರೆ. ದಿಢೀರ್ ವಿದ್ಯಮಾನದಲ್ಲಿ ಸೋಮವಾರ ರಾತ್ರಿಯೇ ದಿಲ್ಲಿಗೆ ತೆರಳಿದ್ದ ಇವರಿಬ್ಬರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಳಿಕ ರಾಜೀನಾಮೆ ನೀಡಿದ್ದಾರೆ.
ಈ ನಡುವೆ ಪಣಜಿಯಲ್ಲಿ ಮಾತನಾಡಿದ ಗೋವಾ ಕಾಂಗ್ರೆಸ್ ವಕ್ತಾರ ನೀಲಕಂಠ ಹರ್ಲಂಕರ್ ಮಾತನಾಡಿ ಸರಕಾರ ರಚಿಸುವ ಪಕ್ಷದ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ವಿಶ್ವಜಿತ್ ರಾಣೆ ಲೋಕಸಭೆ ಚುನಾವಣೆ ಬಳಿಕ ಪಕ್ಷವನ್ನು ಒಡೆದು ಕಾಂಗ್ರೆಸ್ ಸೇರಲು ಬಯಸಿದ್ದಾರೆ. 2 ತಿಂಗಳ ಹಿಂದಿನ ವರೆಗೆ ಅವರು ನನ್ನ ಜತೆ ಸಂಪರ್ಕದಲ್ಲಿದ್ದರು.
ಎ.ಚೆಲ್ಲಕುಮಾರ್, ಕಾಂಗ್ರೆಸ್ ನಾಯಕ
ಚೆಲ್ಲಕುಮಾರ್ ಜತೆಗೆ ಮಾತನಾಡಿಯೇ ಇಲ್ಲ. ನನ್ನನ್ನು ಅನರ್ಹಗೊಳಿಸಬೇಕೆಂದು ಸುಪ್ರೀಂಕೋರ್ಟಲ್ಲಿ ಕಾಂಗ್ರೆಸಿಗರೇ ಅರ್ಜಿ ಸಲ್ಲಿಸಿದ್ದಾರೆ. ಅವರೇ ನನ್ನನ್ನು ಸಂಪರ್ಕಿಸಿದ್ದಾರೆ.
ವಿಶ್ವಜಿತ್ ರಾಣೆ, ಗೋವಾ ಸಚಿವ