ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತ ಜಾಗೃತಿ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿ ಸುವುದನ್ನು ವಿರೋಧಿಸಿ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು “ಗೋ ಬ್ಯಾಕ್ ಅಮಿತ್ ಶಾ’ ಅಭಿಯಾನ ನಡೆಸಿದವು. ನಗರದ ವಿವಿಧೆಡೆ ಕಪ್ಪು ಬಲೂನ್ ಮತ್ತು ಗಾಳಿಪಟ ಹಾರಿಸಿ, ಕಪ್ಪು ಬಟ್ಟೆ ಧರಿಸಿ, ಪ್ರತಿಭಟನೆ ನಡೆಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು 200ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ಶಾ ಆಗಮನ ವಿರೋಧಿಸಿ ಕಾಂಗ್ರೆಸ್ ಸೇರಿ ಎಡಪಂಥೀಯ ಪಕ್ಷಗಳು ಅಭಿ ಯಾನ ನಡೆಸಿ, ಪ್ರತಿಭಟನೆಗೆ ಮುಂದಾ ಗಿದ್ದವು. ಇದ್ಯಾ ವುದಕ್ಕೂ ಪೋಲಿಸ್ ಆಯುಕ್ತರು ಅನುಮತಿ ನೀಡಿರಲಿಲ್ಲ.
ಆದರೂ, ಕಾಂಗ್ರೆಸ್ ಹು-ಧಾ ಮಹಾನಗರ ಜಿಲ್ಲಾ ಮತ್ತು ಗ್ರಾಮೀಣ ಘಟಕ, ಕಾಂಗ್ರೆಸ್ ಮಹಿಳಾ ಘಟಕ, ಕಳಸಾ-ಬಂಡೂರಿ ಹೋರಾಟ ಸಮಿತಿ, ಸಂವಿಧಾನ ರಕ್ಷಣಾ ಸಮಿತಿ, ವಿವಿಧ ದಲಿತ ಪರ ಸಂಘಟನೆಗಳು, ಅಲ್ಪಸಂಖ್ಯಾತ ಸಂಘಟನೆಗಳು ಕಪ್ಪು ಬಟ್ಟೆ ಧರಿಸಿ, ಫಲಕಗಳನ್ನು ಪ್ರದರ್ಶಿಸಿ, ಪ್ರತಿಭಟನೆ ನಡೆಸಿದವು. ಆದರೆ, ಎಡ ಪಂಥೀಯರು ಪ್ರತಿಭಟನೆಯಿಂದ ಹಿಂದೆ ಸರಿದು, ಅಂತ ರ್ಜಾಲ ಬಳಸಿ “ಅಮಿತ್ ಶಾ ಗೋ ಬ್ಯಾಕ್’ ಅಭಿಯಾನ ಮುಂದು ವರಿಸಿ ಅಸಮಾಧಾನ ಹೊರಹಾಕಿದರು.
ಕಪ್ಪು ಬಲೂನ್-ಗಾಳಿಪಟ ಹಾರಿಸಲು ಯತ್ನ: ಗಣೇಶ ಪೇಟೆ ಮುಕ್ಕೇರಿ ಓಣಿಯಲ್ಲಿ ಕಟ್ಟಡವೊಂದರ ಮೇಲಿಂದ ಕಪ್ಪು ಬಣ್ಣದ ಬಲೂನ್‌ಗಳು ಮತ್ತು ಗಾಳಿಪಟ ಹಾರಿಸಲು ಯುವಕರ ಗುಂಪೊಂದು ಯತ್ನಿಸುತ್ತಿದ್ದಾಗ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದರು. ಕಪ್ಪು ಬಣ್ಣದ ಬಲೂನ್, ಗಾಳಿ ಪಟ ಹಾಗೂ ಬಲೂನ್‌ಗೆ ಗಾಳಿ ತುಂಬಲು ಬಳಸಿದ್ದ ಆಕ್ಸಿಜನ್ ಬಾಟಲಿ ವಶಪಡಿಸಿಕೊಂಡರು.