ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದ ವಿವಾದ ಮೂರನೇ ಜಾಗತಿಕ ಮಹಾಯುದ್ಧಕ್ಕೆ ನಾಂದಿಯಾಗಲಿದೆ ಎಂಬ ಭೀತಿ ವಿಶ್ವಮಟ್ಟದಲ್ಲಿ ಮತ್ತೆ ಭುಗಿಲೆದ್ದಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಏಕಸ್ವಾಮ್ಯ ಸಾಧಿಸಲು ಚೀನಾ ಯತ್ನಿಸುತ್ತಿರುವುದು ಹಾಗೂ ಇದಕ್ಕೆ ಅಮೆರಿಕ ಅಡ್ಡಗಾಲು ಹಾಕುತ್ತಿರುವುದರ ಬೆನ್ನಿಗೇ ಎರಡೂ ದೇಶಗಳು ನಿರಂತರ ಸೇನಾ ಶಕ್ತಿ ಪ್ರದರ್ಶನಕ್ಕಿಳಿದಿರುವುದು ಆತಂಕ ಹೆಚ್ಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಚೀನಾ ಸೇನಾಧಿಕಾರಿಗಳ ಪ್ರಕಾರ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧೋರಣೆ ಕಾರಣದಿಂದ ಯುದ್ಧ ಸಂಭವನೀಯತೆ ಹೆಚ್ಚುತ್ತಿದೆ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಧಿಕಾರಿಯೊಬ್ಬರು ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹಾಗೂ ಪೀಪಲ್ಸ್ ಡೈಲಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ ಡೊನಾಲ್ ಟ್ರಂಪ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನ ತಾತ್ವಿಕ ಸಮಿತಿಗೆ ಯುದ್ಧಾಕಾಂಕ್ಷಿ ಸ್ಟೀವ್ ಬ್ಯಾನನ್ ಅವರನ್ನು ನೇಮಿಸಿದ್ದಾರೆ. ಬ್ಯಾನನ್ ಈಗಾಗಲೇ ದಕ್ಷಿಣ ಚೀನಾ ಸಮುದ್ರ ವಿವಾದದ ಹಿನ್ನೆಲೆಯಲ್ಲಿ ಅಮೆರಿಕ ಇನ್ನು 5 ರಿಂದ 10 ವರ್ಷಗಳಲ್ಲಿ ಚೀನಾ ಜೊತೆ ಯುದ್ಧಕ್ಕಿಳಿಯಲಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈ ಬೆಳವಣಿಗೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಇತ್ತೀಚೆಗಷ್ಟೇ ಚೀನಾ ಏಕಕಾಲಕ್ಕೆ 10 ಅಣ್ವಸ್ತ್ರ ಸಿಡಿತಲೆಗಳನ್ನು ಒಮ್ಮೆಲೇ ಹೊತ್ತೂಯ್ಯಬಲ್ಲ ಕ್ಷಿಪಣಿ ಪರೀಕ್ಷೆ ನಡೆಸಿದೆ. ಡಿಎಫ್-5ಸಿ ಹೆಸರಿನ ಈ ಕ್ಷಿಪಣಿಯು 10 ವಿವಿಧ ಗುರಿಗಳಿಗೆ ಏಕ ಕಾಲದಲ್ಲಿ ಅಣ್ವಸ್ತ್ರ ದಾಳಿ ನಡೆಸಬಲ್ಲದು. ಶಾಂಕ್ಸಿ ಪ್ರಾಂತ್ಯದಲ್ಲಿರುವ ತೈಯಾನ್ ಸ್ಪೇಸ್ ಲಾಂಚ್ ಸೆಂಟರ್‌ನಿಂದ 10 ಡಮ್ಮಿ ಅಣ್ವಸ್ತ್ರಗಳನ್ನು ಹೊತ್ತ ಡಾಂಗ್‌ಫೆಂಗ್-5ಸಿ ಕ್ಷಿಪಣಿ ಚೀನಾದ ಪಶ್ಚಿಮದಲ್ಲಿರುವ ಮರಭೂಮಿಗೆ ಹಾರಿದೆ ಎಂದು ಅಮೆರಿಕದ ವಾಷಿಂಗ್ಟನ್ ಫ್ರೀ ಬೇಕಾನ್ ವೆಬ್‌ಸೈಟ್ ವರದಿ ಮಾಡಿದೆ.
ಈ ಮಧ್ಯೆ ಜಗತ್ತಿನ ಎರಡು ಅತ್ಯಂತ ಶಕ್ತಿವಂತ ರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾ ಮಧ್ಯೆ ವಿವಾದ ಉಲ್ಬಣಗೊಳ್ಳುತ್ತಿದ್ದರೂ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ, ಎರಡೂ ದೇಶಗಳು ಮಾತುಕತೆಯ ನಡೆಸಲು ಹಾಗೂ ವಿವಾದಕ್ಕೆ ಸರ್ವಸಮ್ಮತ ನೀತಿ ರೂಪಿಸುವ ನಿಟ್ಟಿನಲ್ಲಿ ಚರ್ಚಿಸಲು ಒಲವು ತೋರಿಲ್ಲ. ಅಲ್ಲದೇ, ಈ ಎರಡೂ ದೇಶಗಳನ್ನು ನಿಯಂತ್ರಿಸಬಲ್ಲ ತೃತೀಯ ಶಕ್ತಿಯೂ ಇಲ್ಲದಿರುವುದನ್ನು ರಕ್ಷಣಾ ತಜ್ಞರು ಗಂಭೀರವಾಗಿ ಪರಿಗಣಿಸಿದ್ದಾರೆ.