Advertisement
ಇದೀಗ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಆರಂಭಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಮನಗಂಡು ಕೇಂದ್ರ ರಾಜ್ಯ ಸರಕಾರಕಾರಗಳ ಹೇರಳ ನಿಧಿಯಿಂದ ಕೈಗೊಂಡ ಹಲವು ಯೋಜನೆಗಳು ವ್ಯರ್ಥವಾಗಿವೆ.ಇದರಿಂದ ಸರಕಾರದ ರಾಷ್ಟ್ರೀಯ ನಿಧಿ ಪೋಲಾಗಿದೆ. ಕೆಲವು ಯೋಜನೆ ಸಕಾಲದಲ್ಲಿ ಅನುಷ್ಠಾನಗೊಳ್ಳದೆ ಜನಾಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದ ನೀರು ಸರಬರಾಜು ಇಲಾಖೆ ಮತ್ತು ಸ್ಥಳೀಯಾಡಳಿತೆಗಳು ಕೈಗೊಂಡ ಅದೆಷ್ಟೋ ಕುಡಿಯುವ ನೀರಿನ ಯೋಜನೆಗಳಲ್ಲಿ ನೀರು ಫಲಾನುಭವಿಗಳಿಗೆ ಲಭಿಸುತ್ತಿಲ್ಲ.
ಕುಡಿಯುವ ಶುದ್ಧ ಜಲ ಪೂರೈಕೆಗಾಗಿ ಕಳೆದ 4 ವರ್ಷಗಳ ಹಿಂದೆ ಕೆಲವು ಗ್ರಾಮ ಪಂಚಾಯತ್‌ಗಳು ಆತುರದಿಂದ ಅನುಷ್ಠಾನಕ್ಕೆ ತರಲುದ್ದೇಶಿಸಿದ ಜಲನಿಧಿ ಕುಡಿಯುವ ನೀರು ಯೋಜನೆ ಹಲವು ವರ್ಷಗಳುರುಳಿದರೂ ಇನ್ನೂ ಪೂರ್ತಿಯಾಗದೆ ಅರ್ಧದಲ್ಲೇ ಮೊಟಕುಗೊಂಡಿರುವುದು ವ್ಯಾಪಕ ಆರೋಪಕ್ಕೆ ಎಡೆಮಾಡಿದೆ. ಜಲನಿಧಿ ಯೋಜನೆಯಲ್ಲಿ ಪ್ರಥಮವಾಗಿ ಪುತ್ತಿಗೆ ಗ್ರಾಮ ಪಂಚಾಯತಿನಲ್ಲಿ ವರ್ಷಗಳ ಹಿಂದೆ ಕೈಗೊಂಡ ಹೆಚ್ಚಿನ ಘಟಕಗಳು ವಿಫಲವಾಗಿವೆ. ಬಳಿಕ ಪೈವಳಿಕೆ ಗ್ರಾ.ಪಂ.ನಲ್ಲಿ 12 ಕಡೆಗಳಲ್ಲಿ ಸುಮಾರು 10 ಕೋಟಿ 77ಲಕ್ಷ ನಿಧಿಯ ಮೂಲಕ ಕಾಮಗಾರಿ ಕೈಗೊಳ್ಳಲಾಗಿದೆ.
Related Articles
Advertisement
ಫಲಾನುಭವಿಗಳಿಂದ ಹೇರಳ ನಿಧಿ ಸೀÌಕರಿಸಿ ಬಳಸಿದ ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗಿದೆ.ಸಮರ್ಪಕವಾಗಿ ನೀರು ಪೂರೈಸದೆ ಮನಬಂದಂತೆ ಶುಲ್ಕ ವಸೂಲು ಮಾಡಲಾಗುತ್ತಿದೆ. ಕಳಪೆ ಕಾಮಗಾರಿಯಿಂದ ನೀರು ಸದಾ ಮೊಟಕುಗೊಳ್ಳುತ್ತಿದೆ. ಪೆರ್ಮುದೆ ಕುಡಿಯುವ ನೀರಿನ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಇಲ್ಲಿ ಕಳಪೆ ಕಾಮಗಾರಿಯಿಂದಲಾಗಿ ಆರಂಭದಿಂದಲೇ ನೀರು ಹರಿಯುವ ಪೈಪ್ ಒಡೆಯಲಾರಂಭಿಸಿದೆ. ಇದೀಗ ವಾರದಿಂದ ನೀರು ಪೂರ್ಣ ಮೊಟಕುಗೊಂಡಿದೆ.
ಒಂದು ದಿನ ನೀರು ಬಂದಲ್ಲಿ ಬಳಿಕ ಕೆಲವು ದಿನ ನೀರು ಮೊಟಕುಗೊಳ್ಳುತ್ತಿದೆ. ಇಲ್ಲಿ ಫಲಾನುಭವಿ ಸಮಿತಿ ಸಭೆ ಕರೆಯದೆ ಮನಬಂದಂತೆ ಹಣ ವಸೂಲು ಮಾಡುತ್ತಿರುವ ಆರೋಪವಿದೆ.
ಡಿಸೆಂಬರ್ ಅಂತ್ಯದ ತನಕ ಸಾಮಾನ್ಯ ಹರಿವಿದ್ದ ಹೊಳೆಗಳಲ್ಲಿ ಜನವರಿಯಾಗುತ್ತಲೇ ಇತ್ತೀಚೆಗಿನ ವರ್ಷದಲ್ಲಿ ಬತ್ತಿ ಹೋಗುತ್ತಿದೆ.ಹೊಳೆಯ ಇಕ್ಕೆಲಗಳ ಕೃಷಿ ಭೂಮಿ ಇದೀಗ ತೀವ್ರ ನೀರಿನ ಕ್ಷಾಮ ಎದುರಿಸುತ್ತಿದೆ. ಪಾರಂಪರಿಕ ನೀರ ಕಟ್ಟಗಳು, ಕಿರು ಅಣೆಕಟ್ಟುಗಳ ಸಮರ್ಪಕ ನಿರ್ವಹಣೆಯಿಲ್ಲದೆ ನೀರು ಬತ್ತಿ ಹೋಗುತ್ತಿದೆ.ದೀರ್ಘ ದೃಷ್ಟಿಯ ಯೋಜನೆಯ ಕೊರತೆ ಮತ್ತು ಅನುಷ್ಠಾನದ ಹಿನ್ನಡೆಯಿಂದ ಮುಂದಿನ ದಿನಗಳಲ್ಲಿ ವ್ಯಾಪಕ ಜಲ ಕೊರತೆ ಎದುರಾಗಲಿದೆ. ಮುಂದಿನ ಯುದ್ಧ ನೀರಿಗಾಗಿ ಎಂಬುದು ದಿಟವಾಗಲಿದೆ.