Advertisement

ಮಕ್ಕಳ ಕೈಗೆ ಆಟಿಕೆ ಕೊಡಿ

09:03 AM Dec 26, 2018 | |

ಅಳುವ ಕಂದನ ಕೈಗೆ ಆಟಿಕೆ ಕೊಟ್ಟು ಸುಮ್ಮನಾಗಿಸುವ ಕಾಲ ಈಗಿಲ್ಲ. ಮಗು ಅತ್ತರೆ, ಊಟ ಮಾಡದಿದ್ದರೆ, ಹಠ ಮಾಡುತ್ತಿದ್ದರೆ, ಮಲಗಲು ಕೇಳದಿದ್ದರೆ, ಎಲ್ಲದಕ್ಕೂ ಒಂದೇ ಪರಿಹಾರ. ಕೈಗೆ ಮೊಬೈಲ್‌ ಕೊಟ್ಟು, ಯಾವುದೋ
ವಿಡಿಯೊ ಹಾಕಿ ಮಗುವನ್ನು ಸುಮ್ಮನಾಗಿಸುವುದು. ಹೀಗೆ ಅಮ್ಮನ ಪ್ರೋತ್ಸಾಹದಿಂದಲೇ ಮೊಬೈಲ್‌ ಸಾಂಗತ್ಯಕ್ಕೆ ಬೀಳುವ ಮಗುವಿಗೆ, ಮುಂದೆ ಬೇರೆಲ್ಲಾ ಆಟಿಕೆಗಳಿಗಿಂತ ಮೊಬೈಲೇ ಹೆಚ್ಚು ಆಕರ್ಷಕ ಎನಿಸುತ್ತದೆ. ಮುಂದೆ,
ಬೇರೆಲ್ಲಾ ಆಟಿಕೆಗಳನ್ನು ಬದಿಗೊತ್ತಿ, ಮೊಬೈಲ್‌ ಗೀಳನ್ನು ಹತ್ತಿಸಿಕೊಳ್ಳುತ್ತದೆ ಮಗು. ಹೀಗಾಗಬಾರದು ಅಂತಾದರೆ, ಮಗುವಿಗೆ ಆಟಿಕೆಯೊಡನೆ ಸಮಯ ಕಳೆಯುವುದನ್ನು ಕಲಿಸಬೇಕು. ವಿಡಿಯೊ ಗೇಮ್‌ಗಳಿಂದ ಹೊರತಾದ ಪ್ರಪಂಚವನ್ನು ಮಕ್ಕಳ ಎದುರು ತೆರೆದಿಡಬೇಕು. ಯಾಕೆಂದರೆ, ಮಕ್ಕಳ ಭಾವನಾತ್ಮಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಆಟಿಕೆಗಳು ಸಹಕಾರಿ ಎನ್ನುತ್ತಾರೆ ತಜ್ಞರು.

Advertisement

ಮಗುವಿಗೆ ಕೊಡಿಸುವ ಆಟಿಕೆಗಳು ಹೇಗಿರಬೇಕು ಅಂದರೆ…
* ಪುಟ್ಟ ಇಟ್ಟಿಗೆಗಳಂಥ (ಬಿಲ್ಡಿಂಗ್‌ ಬ್ಲಾಕ್ಸ್‌) ವಸ್ತುಗಳಿಂದ ಕಟ್ಟಡ ನಿರ್ಮಿಸುವ ಆಟ ಗೊತ್ತೇ ಇದೆ. ಈ ಆಟ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೃಜನಶೀಲತೆ, ಚುರುಕುತನ, ಗಣಿತದ ಸಾಮರ್ಥ್ಯವನ್ನು ಬೆಳೆಸುವ ಈ
ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ, ಆಟವಾಡುವುದನ್ನು ಪ್ರೋತ್ಸಾಹಿಸಿ.
* ಭಾಷಾ ಜ್ಞಾನವನ್ನು ಹೆಚ್ಚಿಸುವ, ಕಲಿಕೆಗೆ ಸಹಾಯವಾಗುವಂಥ ಆಟಿಕೆಗಳನ್ನು ಕೊಡಿಸಿ. ಅಕ್ಷರಗಳನ್ನು ಜೋಡಿಸಿ ಪದ ರಚಿಸುವುದು, ವಸ್ತುಗಳನ್ನು, ಬಣ್ಣಗಳನ್ನು ಗುರುತಿಸುವುದು ಮುಂತಾದವು.
* ಶಾಲೆಗೆ ಹೋಗುವ ಮಕ್ಕಳಿಗೆ, ಪದಬಂಧ, ಸುಡೊಕು ಮುಂತಾದ ಜ್ಞಾನವರ್ಧಕ ಆಟಗಳನ್ನು ಆಡಿಸಬಹುದು. ಹೆತ್ತವರು ಜೊತೆಗಿದ್ದು, ಸಲಹೆ-ಸೂಚನೆಗಳನ್ನುನೀಡುತ್ತಿದ್ದರೆ ಮಕ್ಕಳಲ್ಲೂ ಆಸಕ್ತಿ ಹೆಚ್ಚುತ್ತದೆ.
* ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಂಥ ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ. ಚೌಕಾಕಾರದ ಖಾಲಿ ಪೆಟ್ಟಿಗೆಗಳು, ಅಡುಗೆ ಸೆಟ್‌, ಡಾಕ್ಟರ್ ಕಿಟ್‌… ಹೀಗೆ ಭವಿಷ್ಯದ ಕಲ್ಪನೆಗಳನ್ನು, ಕನಸುಗಳನ್ನು ಮೂಡಿಸುವ ಹಲವಾರು ಆಟಿಕೆಗಳಿವೆ.
* ನಾವೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ಬುಗುರಿ, ಚನ್ನೆಮಣೆ, ಚದುರಂಗ, ಪಗಡೆ, ಹಾವು- ಏಣಿಯಂಥ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಈ ಆಟಗಳು ಮೊಬೈಲ್‌ ಗೇಮ್‌ಗಳ ಸ್ವರೂಪ ಪಡೆದಿದ್ದರೂ, ಎಲ್ಲರೂ ಒಟ್ಟಾಗಿ ಕುಳಿತು
ಆಡುವುದರಿಂದ ಮಕ್ಕಳ ಸಂವಹನ ಶಕ್ತಿ ಹೆಚ್ಚುತ್ತದೆ.
* ಜಿಗಿಯುವ ಗೊಂಬೆಗಳು, ಚೆಂಡು ಮುಂತಾದ ಆಟಿಕೆಗಳು ಮಕ್ಕಳನ್ನು ದೈಹಿಕವಾಗಿ ಫಿಟ್‌ ಆಗಿಸುತ್ತವೆ. ಮನೆಯ ಹೊರಗೆ, ಸಮವಯಸ್ಕರ ಜೊತೆ ಇಂಥ ಆಟಗಳನ್ನು ಆಡಿದಾಗ ಅವರಲ್ಲಿ ಕ್ರೀಡಾ ಮನೋಭಾವವೂ ಮೂಡುತ್ತದೆ.
* ಆ್ಯಕ್ಷನ್‌ ಗೇಮ್‌ಗಳು (ಸೈನಿಕರು, ಸಣ್ಣ ಪುಟ್ಟ ಆಯುಧಗಳ ಆಟಿಕೆ ಸೆಟ್‌ಗಳು) ಮಕ್ಕಳಲ್ಲಿ ಹಿಂಸಾತ್ಮಕ ಭಾವನೆ ಬೆಳೆಸುತ್ತವೆ ಎಂಬ ಆತಂಕ ಕೆಲವರದ್ದು. ಆದರೆ, ಅಂಥ ಆಟಿಕೆಗಳು ಕಲ್ಪನಾಶಕ್ತಿ ಮತ್ತು ಸಾಹಸ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬುದೂ ಸುಳ್ಳಲ್ಲ.

ಪುಷ್ಪಲತಾ

Advertisement

Udayavani is now on Telegram. Click here to join our channel and stay updated with the latest news.

Next