ದೇವನಹಳ್ಳಿ: ದೈಹಿಕ ಬೆಳವಣಿಗೆಯ ಮೇಲೆ ದುಷ್ಪಪರಿಣಾಮ ಬೀರುವ ಜಂತು ಹುಳು ಸಮಸ್ಯೆಯನ್ನು ನಿರ್ಲಕ್ಷಿಸಬಾರದು ಎಂದು ಜಿಪಂ ಸದಸ್ಯ ಕೆ.ಸಿ ಮಂಜುನಾಥ್ ತಿಳಿದರು. ತಾಲೂಕಿನ ಕನ್ನಮಂಗಲ ಗ್ರಾಮದ ಮಾರುತಿ ವಿದ್ಯಾ ಮಂದಿರ ಶಾಲೆಯಲ್ಲಿ ಆರೋಗ್ಯ ಇಲಾಖೆ ಹಮ್ಮಿ ಕೊಂಡಿದ್ದ ಶಾಲಾ ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತ ಹೀನತೆ ಹಾಗೂ ಅಪೌಷ್ಟಿಕತೆ ಉಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಆರೋಗ್ಯ ಹದಗೆಟ್ಟರೆ ವಿದ್ಯಾವಂತರಾಗಲು ಸಾಧ್ಯವಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ ಎಂದರು.
ಹೀಗಾಗಿ ಜಂತುಹುಳು ಮಾತ್ರೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಜಂತುಹುಳು ಕಾರಣವಾಗುವುದು. ಬಹಿರ್ದೆಸೆ ಹಾಗೂ ಕಲುಷಿತ ಪ್ರದೇಶದಿಂದ ಉತ್ಪತ್ತಿಯಾ ಗುವ ಜಂತು ಹುಳು ಮಕ್ಕಳ ದೇಹ ಸೇರಿದಾಗ ಶೇ.40-50 ರಕ್ತ ಹೀನತೆಯ ಜೊತೆಗೆ ಮಾರಣಾಂತಿಕ ಸ್ಥಿತಿಗೆ ತಲುಪುವ ಸಾಧ್ಯತೆಯೂ ಇರುತ್ತದೆ.
ಶುಚಿತ್ವ ಹಾಗೂ ಬಯಲು ಮಲ ವಿಸರ್ಜನೆಯಿಂದ ಮಗುವಿಗೆ ಬೇಗ ರೋಗ ತಗುಲುವ ಸಾಧ್ಯತೆ ಹೆಚ್ಚಿದ್ದು, ಮಕ್ಕಳು ಶುಚಿತ್ವದ ಬಗ್ಗೆ ಗಮನ ಹರಿಸಬೇಕು. ಬೆರಳುಗಳ ಉಗುರುಗಳನ್ನು ಸ್ವತ್ಛವಾಗಿಟ್ಟು ಕೊಳ್ಳಬೇಕು. ಕೈ ತೊಳೆದು ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಮಾರುತಿ ವಿದ್ಯಾ ಮಂದಿರ ಶಾಲೆ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಜೀವನದಲ್ಲಿ ಎಲ್ಲಾ ಐಶ್ವರ್ಯಕ್ಕಿಂತ ಮನುಷ್ಯನಿಗೆ ಆರೋಗ್ಯವೇ ಉನ್ನತವಾಗಿದ್ದು, ಆರೋಗ್ಯವಂತ ಮಕ್ಕಳೆ ದೇಶದ ಆಸ್ತಿ. ಜಂತು ಹುಳು ಆರೋಗ್ಯಕ್ಕೆ ಮಾರಕವಾಗಿದ್ದು, ಕಲುಷಿತ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣು ಮಕ್ಕಳಲ್ಲಿ ಬೇಗನೆ ಆವರಿಸಿಕೊಂಡು ರಕ್ತದ ಕೊರತೆ ಮಾಡುವುದಲ್ಲದೆ ಅಶಕ್ತರನ್ನಾಗಿಸುತ್ತದೆ.
ಜಂತು ಹುಳು ಚಿಕ್ಕ ಮಕ್ಕಳನ್ನು ಹೆಚ್ಚು ಭಾದಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆಯೂ ಗಂಭೀರ ದುಷ್ಪಪರಿಣಾಮ ಬೀರುತ್ತದೆ ಎಂದರು. ಈ ವೇಳೆ ಮಾರುತಿ ವಿದ್ಯಾ ಮಂದಿರ ಶಾಲೆಯ ಕಾರ್ಯದರ್ಶಿ ರಾಧಾ ಶ್ರೀನಿವಾಸ್, ಮುಖ್ಯ ಶಿಕ್ಷಕ ರಾಮ ಚಂದ್ರಪ್ಪ, ದೈಹಿಕ ಶಿಕ್ಷಕ ಚಂದ್ರಪ್ಪ, ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಅಂಜಲಿ ಇದ್ದರು.