ಕೊರಟಗೆರೆ: ಕೊರಟಗೆರೆ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಗಂಗಹನುಮಯ್ಯನವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
ಪಟ್ಟಣದ ನವೀನ್ ಕಂಫರ್ಟ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಶಿವಣ್ಣ ಮಾತನಾಡಿ, ಗಂಗಹನುಮಯ್ಯನವರು ಹಾಗೂ ಅವರ ಕುಟುಂಬದವರು 2006ರಿಂದಲೂ ಸಕ್ರಿಯವಾಗಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದು, ಎಲ್ಲಾ ಜನಾಂಗದ ಹಾಗೂ ಎಲ್ಲಾ ವರ್ಗಗಳು ಮೆಚ್ಚುವಂತಹ ಕೆಲಸವನ್ನು ಮಧುಗಿರಿಯಲ್ಲಿ 2 ಬಾರಿ ಶಾಸಕರಿದ್ದಾಗ ಮಾಡಿ ತೋರಿಸಿಕೊಟ್ಟಿದ್ದಾರೆ. ಹೀಗೆ ಎಲ್ಲ ವರ್ಗ ಮತ್ತು ಜನರು ಮೆಚ್ಚುವಂತಹ ವ್ಯಕ್ತಿತ್ವವುಳ್ಳ ವ್ಯಕ್ತಿತ್ವ ಗಂಗಹನುಮಯ್ಯನವರ ಕುಟುಂಬದ್ದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಗಂಗಹನುಮಯ್ಯನವರ ಕುಟುಂಬದ ಯಾರೊಬ್ಬರಿಗಾದರೂ ಟಿಕೆಟ್ ನೀಡಿದರೆ ಗೆಲುವಿನ ಗುರಿ ತಲುಪಬಹುದು ಎಂದರು.
2008 ರ ಚುನಾವಣೆಯಲ್ಲಿ ಗಂಗಹನುಮಯ್ಯನವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 33,000 ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದರು. ಅಂದೇ ಜಯಭೇರಿ ಬಾರಿಸಬಹುದಿತ್ತು ಆದರೆ ಜಾತ್ಯತೀತ ಜನತಾದಳದ ಅಭ್ಯರ್ಥಿಯು ಸಹ ಒಂದೇ ಸಮುದಾಯದವಾರಾದುದರಿಂದ ಮತ ವಿಭಜನೆಯಾಗಿ ಪರಾಭವ ಹೊಂದಬೇಕಾಯಿತು. 2013ರ ಚುನಾವಣೆಯಲ್ಲಿ ಕಾಣದ ಕೈಗಳ ಕೈವಾಡದಿಂದ ಬಿಜೆಪಿ ಟಿಕೆಟ್ ತಪ್ಪಿಸಿದರು. ಅದರ ಪರಿಣಾಮ ಪಕ್ಷವು ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಿಳಿಸಿದರು.
ಕಾರ್ಯಕರ್ತ ಲಕ್ಷ್ಮಿಪತಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆ ಅಭ್ಯರ್ಥಿಯಾಗಿದ್ದ ಸಂಸದ ಜಿ. ಎಸ್ ಬಸವರಾಜ್ ರವರು ಗಂಗಹನುಮಯ್ಯರ ಮನೆಗೆ ಧಾವಿಸಿ, ನಮ್ಮನ್ನೆಲ್ಲ ಅಲ್ಲಿಗೆ ಕರೆಸಿ ಮುಂದಿನ ದಿನಮಾನಗಳಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಗಂಗಹನುಮಯ್ಯರಿಗೆ ಅಥವಾ ಅವರ ಕುಟುಂಬದ ಒಬ್ಬರಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದರು. ಗಂಗಹನುಮಯ್ಯ ಆಗ ಅವರ ಕಾರ್ಯವೈಖರಿಯನ್ನು ಕಂಡು ತಾವೆಲ್ಲರೂ ಕೂಡ ಸಂತೋಷಪಡಬೇಕೆಂದು ಎಂದು ನಮ್ಮೆಲ್ಲರ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದರು. ಅದರಂತೆ ಇಂದು ಆ ಮಾತನ್ನು ಉಳಿಸಿಕೊಳ್ಳಬೇಕು. ಬಿಜೆಪಿ ಟಿಕೆಟ್ ಕೊಡಿಸುವ ಜವಾಬ್ದಾರಿ ಸನ್ಮಾನ್ಯ ಸಂಸದರದ್ದಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಎಲ್ ನರಸಿಂಹಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೃಷ್ಣಪ್ಪ ಕಾರ್ಯದರ್ಶಿ ವೆಂಕಟಸ್ವಾಮಿ, ಶಿವರಾಜ್, ಕೃಷ್ಣಮೂರ್ತಿ, ದೇವರಾಜ್, ನವೀನ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.