ಮನಸ್ಸು ಗುರಿಯಿಲ್ಲದೆ ಹಾರುವ ಹಕ್ಕಿಯಂತೆ. ಅದು ಒಂದು ಕ್ಷಣ ಬಿಡುವಿಲ್ಲದೆ ಏನೇನೋ ಯೋಚಿಸುತ್ತಾ ಇರುತ್ತದೆ. ಎಷ್ಟೇ ನಿಯಂತ್ರಿಸಿದರೂ ಆಗಿ ಹೋದ ಘಟನೆಗಳನ್ನು ಮರುಕಳಿಸುತ್ತದೆ. ಜೀವನದಲ್ಲಿ ನಡೆದ ಎಲ್ಲ ಕೆಟ್ಟ ವಿಚಾರಗಳನ್ನು ಮರೆಯಬೇಕು ಅನ್ನುವಷ್ಟರಲ್ಲಿ ಮತ್ತೇನೋ ಘಟನೆ ಸಂಭವಿಸಿ ಮನಸ್ಸು ಮತ್ತಷ್ಟು ರೋಸಿ ಹೋಗುತ್ತದೆ. ವಾಸ್ತವವೇನೆಂದರೆ, ಒಂದು ಸಮಸ್ಯೆಗೆ ಮನಸ್ಸಿನಲ್ಲಿ ಪರಿಹಾರ ಹುಡುಕುತ್ತಾ ಜೀವನದ ಅದೆಷ್ಟೋ ನೆಮ್ಮದಿಯ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ, ಕಳೆದುಕೊಂಡಿರುತ್ತೇವೆ.
ಸಮಸ್ಯೆಗಳು ಸಹಜ. ಪ್ರತಿಯೊಂದು ಸಮಸ್ಯೆಯು ಜೀವನಕ್ಕೊಂದು ಪಾಠವನ್ನು ಹೇಳಿಕೊಡುತ್ತದೆ. ಅದಕ್ಕಾಗಿ ಸಮಸ್ಯೆಯಿಂದ ಹೊರಬಂದು ನಾಳಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಆಗಿ ಹೋದ ಘಟನೆಗಳನ್ನು ಮೆಲುಕು ಹಾಕುತ್ತಾ ದಿನ ಕಳೆಯುವುದು ತರವಲ್ಲ. ಕಷ್ಟ ಸುಖ ಜೀವನದ ಅಂಗ. ಅದರ ಜತೆಗೆ ಆತ್ಮವಿಶ್ವಾಸವು ಬಹುಮುಖ್ಯವಾಗಿದೆ. ಒಂದರ ಬಳಿಕ ಇನ್ನೊಂದು ಸರಮಾಲೆಯಂತೆ ಕಷ್ಟಗಳು ಎದುರಾಗುತ್ತಲೇ ಇರುತ್ತವೆೆ. ಅದಕ್ಕೆ ತಲೆ ತಗ್ಗಿಸದೆ ಜೀವನದಲ್ಲಿ ಸಕಾರತ್ಮಕ ಯೋಚನೆಯಿಂದ ಗುರಿ ತಲುಪಬೇಕು.
ನಿನ್ನೆಯ ಕಷ್ಟಕ್ಕೆ ಸೋತು ಇಂದಿನ ಖುಷಿಯನ್ನು ಕಳೆದುಕೊಳ್ಳುವುದು ಮೂರ್ಖತನ. ಒಳ್ಳೆಯ ಕ್ಷಣಗಳನ್ನು ಅನುಭವಿಸಬೇಕು, ಸಾಧ್ಯವಾದರೆ ನಮ್ಮಂತೆಯೇ ಇರುವ, ನೋವಿನ ಮನಸ್ಸಿಗೆ ಸಮಾಧಾನ ಹೇಳಬೇಕು. ಆಗ ನಮ್ಮ ನೋವನ್ನು ಮರೆತು ಪ್ರತಿದಿನ ಹೊಸತನ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಇದನ್ನು ಹೊರತುಪಡಿಸಿ ಕಷ್ಟಕ್ಕೆ ಹೆದರಿ ಹಿಂಜರಿಯಬಾರದು. ಕಷ್ಟ ಯಾರನ್ನೂ ಬಿಡುವುದಿಲ್ಲ. ಹಾಗೆಯೇ ಸುಖ ಯಾರ ಸ್ವತ್ತೂ ಅಲ್ಲ. ಜೀವನದಲ್ಲಿ ಕಷ್ಟ ಬಂದರೆ ಮಾತ್ರ ಸುಖ ಅನುಭವಿಸಲು ಸಾಧ್ಯ. ಈ ಸತ್ಯಾಂಶವನ್ನು ತಿಳಿದು ಮುನ್ನಡೆಯಬೇಕು. ಜೀವನ ಒಂದು ಸುಂದರ ಹಕ್ಕಿಯಂತೆ ಅದನ್ನು ಸರಿಯಾದ ದಾರಿಯಲ್ಲಿ ಆಯ್ಕೆಮಾಡಿ ರೂಪಿಸಿಕೊಂಡರೆ ಮಾತ್ರ ಅದೂ ಸ್ವಚ್ಛಂದವಾಗಿ ಹಾರಲು ಸಾಧ್ಯ.
ನಿಶ್ಮಿತಾ , ಶ್ರೀರಾಮಕುಂಜೇಶ್ವರ ಕಾಲೇಜು, ರಾಮಕುಂಜ