ಬೆಂಗಳೂರು: ”ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ” ಎಂದು ಹೇಳಿಕೆ ನೀಡಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ ವಿವಾದಕ್ಕೆ ಗುರಿಯಾಗಿದ್ದಾರೆ. ಹೇಳಿಕೆ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ತುರುವೇಕೆರೆಯಲ್ಲಿ ವಿ.ಸೋಮಣ್ಣ ಅವರ ಪ್ರಚಾರ ಸಮಾರಂಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಟೀಕಿಸುವ ಭರದಲ್ಲಿ ಹೇಳಿಕೆ ನೀಡಿದ್ದರು.
ಹೇಳಿಕೆ ಕುರಿತು ಕಾಂಗ್ರೆಸ್ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿ, ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೇನಷ್ಟೆ. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾನು ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇನೆ. ಮಹಿಳೆಯರ ನೋವಿಗೆ ಸ್ಪಂದನೇ ಎಂಬಂತೆ ಸರಾಯಿ ನಿಷೇಧವನ್ನೂ ಮಾಡಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವೆ ಲಕ್ಷ್ಮಿ ಹೆಬ್ಬಾಳ್ ಕಾರ್ ಸೇರಿ ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದು,ಕೆಪಿಸಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಕುಮಾರಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
”ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ತಮ್ಮ ಕುಟುಂಬಕ್ಕೆ ಟಿವಿ ಖರೀದಿಸಿದ್ದು ದಾರಿ ತಪ್ಪುವುದೇ?ಫ್ರಿಡ್ಜ್ ಖರೀದಿಸುವುದು ತಪ್ಪು ದಾರಿಯೇ? ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದು ತಪ್ಪು ದಾರಿಯೇ? ದುಡಿವ ಮಗನನ್ನು ಕಳೆದುಕೊಂಡ ವೃದ್ಧೆ ಗೃಹಲಕ್ಷ್ಮಿ ಹಣದಲ್ಲಿ ಜೀವ ಸಾಗಿಸುವುದು ದಾರಿ ತಪ್ಪಿದಂತೆಯೇ?ಔಷಧಿ ಖರೀದಿಸುವುದು ದಾರಿ ತಪ್ಪಿದಂತೆಯೇ? ಕುಮಾರಸ್ವಾಮಿ ಅವರೇ,ಮಹಿಳೆಯರು ಅತ್ಯಂತ ಹೆಚ್ಚು ಜವಾಬ್ದಾರಿ ಇರುವವರು, ಕುಟುಂಬದ ಸುಧಾರಣೆಗೆ ಶ್ರಮಿಸುವವರು,ತಮ್ಮ ಕೈ ಸೇರುವ ಹಣವನ್ನು ಜತನದಿಂದ ಸಂಸಾರದ ಉದ್ಧಾರಕ್ಕೆ ಬಳಸುವವರು. ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಓಡಾಟ, ಊರು ತುಂಬಾ ಮನೆ ಹೊಂದಿರುವ ತಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗುಬಲ್ಲದು..” ಎಂದು ಆಕ್ರೋಶ ಹೊರ ಹಾಕಿದೆ.