ಹೊಸದಿಲ್ಲಿ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬಿಹಾರದ ಬೇಗುಸರಾಯ್ ಕ್ಷೇತ್ರದಿಂದಲೇ ಸ್ಪರ್ಧಿಸುವರು ಮತ್ತು ಅವರ ಎಲ್ಲ ಸಮಸ್ಯೆಗಳನ್ನು ಪಕ್ಷವು ಬಗೆಹರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಖಡಕ್ ಆಗಿ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದಿದ್ದ ನವಾಡಾ ಕ್ಷೇತ್ರವನ್ನು ಈ ಬಾರಿ ನನಗೆ ನಿರಾಕರಿಸುವ ಮೂಲಕ ಪಕ್ಷದ ರಾಜ್ಯ ನಾಯಕತ್ವ ನನ್ನ ಆತ್ಮ ಗೌರವ, ಪ್ರತಿಷ್ಠೆಯನ್ನು ಅಗೌರವಿಸಿ ನನ್ನ ಕೈಬಿಟ್ಟಿದೆ ಎಂದು ಗಿರಿರಾಜ್ ಸಿಂಗ್ ಮೊನ್ನೆ ಸೋಮವಾರ ಗಂಭೀರವಾಗಿ ಆರೋಪಿಸಿದ್ದರು.
ಸಿಂಗ್ ಅವರ ಪ್ರತಿಸ್ಪರ್ಧಿ ಕನ್ಹಯ್ಯ ಕುಮಾರ್ ಅವರು “ಗಿರಿರಾಜ್ ಸಿಂಗ್ ಅವರ ಹಠವನ್ನು ನೋಡುವಾಗ ಶಾಲೆಗೆ ಹೋಗೆನೆಂದು ಚಂಡಿ ಹಿಡಿಯುವ ಹುಡುಗನ ಹಾಗೆ ಕಾಣುತ್ತಾರೆ’ ಎಂದು ಗೇಲಿ ಮಾಡಿದ್ದರು.
ಗಿರಿರಾಜ್ ಸಿಂಗ್ ಅವರಿಗೆ ಟ್ವಿಟರ್ ಮೂಲಕ ಶುಭ ಹಾರೈಸಿರುವ ಅಮಿತ್ ಶಾ, ‘ಕೇಂದ್ರ ಸಚಿವ ಸಿಂಗ್ ಅವರು ಎತ್ತಿರುವ ಎಲ್ಲ ಸಮಸ್ಯೆಗಳನ್ನು ಪಕ್ಷವು ಬಗೆಹರಿಸಲಿದೆ’ ಎಂದು ಹೇಳಿದ್ದಾರೆ.
ಬಿಹಾರದ 40 ಲೋಕಸಭಾ ಸೀಟುಗಳ ಪೈಕಿ 17ರಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಇಷ್ಟೇ ಸಂಖ್ಯೆಯ ಸೀಟುಗಳಲ್ಲಿ ಮಿತ್ರ ಪಕ್ಷ ಜೆಡಿಯು ಸ್ಪರ್ಧಿಸಲಿದೆ.
ಉಳಿದ ಸೀಟುಗಳಲ್ಲಿ ಇನ್ನೊಂದು ಮಿತ್ರ ಪಕ್ಷ ಎಲ್‌ಜೆಪಿ ಸ್ಪರ್ಧಿಸಲಿದೆ. ಈ ಮೂರೂ ಪಕ್ಷಗಳ ನಡುವಿನ ಸೀಟು ಹೊಂದಾಣಿಕೆ ಸೂತ್ರದ ಪ್ರಕಾರ ನವಾಡ ಕ್ಷೇತ್ರವನ್ನು ಜೆಡಿಯು ಗೆ ಕೊಡಲಾಗಿದೆ.