ಬೆಂಗಳೂರು: ದೈತ್ಯಾಕಾರದ ಈ ಹೋರಿಯ ಹೆಸರು “ಗಿರ್’. ಇದರ ಬೆಲೆ ಕೇಳಿದರೆ ತಲೆ ಪಕ್ಕಾ ಗಿರಗಿಟ್ಲೆ! ಹೌದು, ಸಾಮಾನ್ಯವಾಗಿ ಒಂದು ಹೋರಿಯ ಬೆಲೆ ಎರಡು ಲಕ್ಷ? ಅಬ್ಬಬ್ಟಾ ಎಂದರೆ ಐದು ಲಕ್ಷ ರೂ. ಇರಬಹುದು. ಆದರೆ, ಈ ಹೋರಿಯ ಬೆಲೆ ಬರೋಬ್ಬರಿ 24 ಲಕ್ಷ ರೂ. ಈ ಬಾರಿಯ ಬೆಂಗಳೂರು “ಕೃಷಿ ಮೇಳ’ದಲ್ಲಿ ಗಿರ್ ಹೋರಿ ಪ್ರಮುಖ ಆಕರ್ಷಣೆ ಆಗಲಿದೆ.
ನ.15ರಿಂದ 18ರವರೆಗೆ ನಡೆಯಲಿರುವ ಬೆಂಗಳೂರು ಕೃಷಿ ಮೇಳಕ್ಕಾಗಿಯೇ ಈ ಅಪರೂಪದ ಹೋರಿಯನ್ನು ಗುಜರಾತಿನ ಭಾವನಗರದಿಂದ ತರಲಾಗುತ್ತಿದೆ. ಸುಮಾರು 1,200 ಕೆ.ಜಿ ತೂಕವಿರುವ ಈ ಹೋರಿಯನ್ನು ಅತ್ಯಂತ ಜಾಗರೂಕತೆಯಿಂದ ಲೊ ಬೆಡ್ ಲಾರಿ (ಕಾರುಗಳ ಸಾಗಾಣಿಕೆಗೆ ಬಳಸುವ ವಾಹನ)ಯಲ್ಲಿ ಕರೆತರಲಾಗುತ್ತಿದ್ದು, ಮೇಳದ ದಿನ ಅದು ಕೃಷಿ ವಿವಿ ಆವರಣದಲ್ಲಿ ಬಂದಿಳಿಯಲಿದೆ. ಅಂದು ಪಶುಸಂಗೋಪನಾ ವಿಭಾಗದ ಮಳಿಗೆಗಳ ಸಾಲಿನಲ್ಲಿ ಇದನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.
ಗುಜರಾತಿನ ಗಿರ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ ಈ ತಳಿ ಕಂಡುಬಂದಿದ್ದರಿಂದ ಇದಕ್ಕೆ ಗಿರ್ ಎಂದು ಹೆಸರಿಡಲಾಗಿದೆ. ಇಡೀ ದೇಶದಲ್ಲಿ ಹುಟಡುಕಿದರೂ ಈ ತಳಿಯ ಹೋರಿಗಳು ಸಿಗುವುದು ಕೇವಲ ಐದು! ಆ ಪೈಕಿ ಒಂದು ಹೋರಿ ಹತ್ತಿರದ ಕನಕಪುರದಲ್ಲಿರುವುದು ವಿಶೇಷ. ಇಂತಹ ಒಂದು ಗಿರ್ ಹೋರಿಯ ನಿರ್ವಹಣೆಗೆ ತಿಂಗಳಿಗೆ 20ರಿಂದ 25 ಸಾವಿರ ರೂ. ಬೇಕಾಗುತ್ತದೆ. ಇದನ್ನು ಸಾಕುವವರು ಕಾಂಕ್ರೀಟ್‌ನಿಂದ ಕಟ್ಟಿದ ಕಟ್ಟೆ ಅದರ ಮೇಲೆ ಬಿದಿರಿನಿಂದ ಶೆಡ್ ನಿರ್ಮಿಸಬೇಕು.
ಹಸಿ ಮತ್ತು ಒಣ ಮೇವು ಇದರ ಆಹಾರ. ಇದರ ಒಂದು ಡೋಸ್ ವೀರ್ಯ 1,200 ರೂ. ಬೆಲೆ ಬಾಳಲಿದ್ದು, ತಿಂಗಳಿಗೆ ನೂರು ಕೃತಕ ಗರ್ಭಧಾರಣೆ ಮಾಡಬಹುದು. ಸಾಮಾನ್ಯ ಹೋರಿಗಳ ವೀರ್ಯದಿಂದ ಮಾಡಲಾಗುವ ಕೃತಕ ಗರ್ಭಧಾರಣೆಗೆ 25ರಿಂದ 50 ರೂ. ಖರ್ಚಾಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ಚಿದಾನಂದ ಮಾಹಿತಿ ನೀಡುತ್ತಾರೆ.
ಗಿರ್ ಹಸು ಮತ್ತು ಅದರ ಕರು ಕೂಡ ಕೃಷಿ ಮೇಳಕ್ಕೆ ಅತಿಥಿಗಳಾಗಿ ಬರುತ್ತಿವೆ. ಅಪ್ಪಟ ದೇಸಿ ಹಸುವಾಗಿದ್ದರೂ ದಿನ್ಕಕೆ 15ರಿಂದ 20 ಲೀ. ಹಾಲು ಕೊಡುವುದು ಗಿರ್ ಹಸುಗಳ ವಿಶೇಷತೆ. ಈ ಹಸುವಿನ ಹಾಲಿನ ಬೆಲೆ ನಂದಿನಿ ಹಾಲಿಗಿಂತ ದುಪ್ಪಟ್ಟು. ಅಂದರೆ 50 ರೂ.ಗೆ ಲೀ. ಯಾಕೆಂದರೆ “ಎ2ಟೈಪ್’ (ಭುಜಗಳಿರುವ ತಳಿ)ಗೆ ಸೇರಿದ ಹಾಲು ಪಚನಶಕ್ತಿ ಹಾಗೂ ಔಷಧೀಯ ಗುಣವುಳ್ಳದ್ದಾಗಿರುತ್ತದೆ.
ಈ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗೇ ನಿರ್ವಹಣೆ ಕೂಡ ಸುಲಭ. ಹೆಚ್ಚು ಹಾಲು ಕೊಡುವ ವಿದೇಶಿ ತಳಿಗೆ ನಾವು ಆಕರ್ಷಿತರಾಗುತ್ತೇವೆ. ಆದರೆ, ದೇಶೀಯವಾಗಿಯೂ ನಮ್ಮಲ್ಲಿ ಉತ್ತಮ ತಳಿಗಳಿವೆ. ಅವುಗಳ ಪರಿಚಯ ಹಾಗೂ ಇಲ್ಲಿನ ರೈತರು ಸಾಕಲು ಪ್ರೋತ್ಸಾಹ ನೀಡುವುದು ಇದರ ಉದ್ದೇಶ ಎಂದು ಅವರು ಹೇಳುತ್ತಾರೆ.
ಕಡಕನಾತ್, ಯಾಳಿಗ ಆಕರ್ಷಣೆ: ಇದಲ್ಲದೆ, ರಕ್ತ ಮತ್ತು ಮಾಂಸ ಕಪ್ಪಾಗಿರುವ ಕಡಕನಾತ್ ಕೋಳಿ, ಬಾಗಲಕೋಟೆಯ ಯಳಗಾ ಮೇಕೆ ಮೇಳದಲ್ಲಿ ಗಮನಸೆಳೆಯಲಿವೆ. ಯಳಗಾ ಮೇಕೆಯ ಚರ್ಮದಿಂದ ತಯಾರಿಸಿದ ಬೆಲ್ಟ್, ಬ್ಯಾಗ್ ಮತ್ತಿತರ ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ.
ಕಡಕನಾತ್ ಕೋಳಿಯನ್ನು ಕಳೆದ ಬಾರಿ ಮೇಳದಲ್ಲೂ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇದಾದ ನಂತರ ಈ ಕೋಳಿ ಸಾಕಾಣಿಕೆಗೆ ಹೆಚ್ಚು ಬೇಡಿಕೆ ಕೇಳಿಬರುತ್ತಿದೆ. ಸ್ಟಾರ್ಟ್‌ಅಪ್ ಕಂಪನಿಯೊಂದು ಕಡಕನಾತ್ ತಳಿಯನ್ನು ಪ್ರೋತ್ಸಾಹಿಸುತ್ತಿದೆ. ಮೇಳದಲ್ಲಿ ಈ ಕೋಳಿಯ ರುಚಿಯನ್ನೂ ಸವಿಯಬಹುದು ಎಂದು ಡಾ.ಚಿದಾನಂದ ತಿಳಿಸಿದರು.