Advertisement
ಈ ಮಧ್ಯೆ, ಮಹಾರಾಷ್ಟ್ರದ ಕೊಯ್ನಾ ಹಾಗೂ ಕಾಳಮ್ಮ ವಾಡಿ ಜಲಾನಯನ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ದೂಧಗಂಗಾ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿದೆ.
1.74 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಚಿಕ್ಕೋಡಿ ತಾಲೂಕಿನಲ್ಲಿ ಎಂಟು ಬ್ರಿಜ್ ಕಮ್ ಬಾಂದಾರಗಳು ನೀರಿನಲ್ಲಿ ಮುಳುಗಿದ್ದರೆ, ರಾಯಬಾಗ ತಾಲೂಕಿನಲ್ಲಿ ಕುಡಚಿ ಹಾಗೂ ರಾಯಬಾಗ ಮತ್ತು ಚಿಂಚಲಿ ಸೇತುವೆ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿವೆ. ಘಟಪ್ರಭಾ ನದಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ನಾಲ್ಕು ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
Related Articles
Advertisement
ಈ ಮಧ್ಯೆ, ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲೂಕಿನ ನುಗು ಜಲಾಶಯ ಭರ್ತಿ ಹಂತ ತಲುಪಿರುವುದರಿಂದ ನುಗುನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುವ ಜನತೆ ಜನ-ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ. ಇದೇ ವೇಳೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಮತ್ತು ಉತ್ತರ ಕನ್ನಡದ ಆಯ್ದ ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ಸಾಧ್ಯತೆ ಕಡಿಮೆ ಇದ್ದು, ಅಲ್ಲಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.