ನವಿಮುಂಬಯಿ: ನಾವು ಒಬ್ಬರೇ ದೇವರನ್ನು ಪ್ರಾರ್ಥಿಸುವುದ ಕ್ಕಿಂತ ಸಾಮೂಹಿಕವಾಗಿ ಎಲ್ಲರೂ ಒಂದಾಗಿ ದೇವರನ್ನು ಪ್ರಾರ್ಥಿಸುವುದ ರಿಂದ ದೇವರು ನಮಗೆ ಬೇಗ ಪ್ರಸನ್ನರಾಗುತ್ತಾರೆ. ನಾವು ಸದಾ ದೇವರನ್ನು ಪ್ರಾರ್ಥಿಸುವುದರಿಂದ ನಮಗೆ ಮನಃಶಾಂತಿ ನೆಮ್ಮದಿ ಸಿಗುತ್ತದೆ. ನಾವು ಲಕ್ಷ್ಮೀ ಯನ್ನು ಪ್ರಾರ್ಥಿಸುವುದರ ಜೊತೆಗೆ ನಾರಾಯಣನನ್ನು ನೆನೆಯಬೇಕು. ಕೆಲವರು ಬರೇ ಸಂಪತ್ತು ನೀಡೆಂದು ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸುತ್ತಾರೆ. ಅದರ ಜೊತೆಗೆ ನಮಗೆ ಮನ:ಶಾಂತಿ, ನೆಮ್ಮದಿ, ಆರೋಗ್ಯ ನೀಡೆಂದು ನಾರಾಯಣನನ್ನು ಪ್ರಾರ್ಥಿಸಬೇಕು. ಸುಮಂಗಳೆಯರು ಶ್ರಾವಣ ಮಾಸದ ಶುಭ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತದ ಪೂಜೆ ಮಾಡುವುದರಿಂದ ಸೌಭಾಗ್ಯ, ಸಂಪತ್ತು, ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಕಳೆದ 10 ವರ್ಷಗಳಿಂದ ವರಮಹಾಲಕ್ಷ್ಮೀ ವ್ರತದ ಪೂಜೆಯನ್ನು ಮಾಡುತ್ತಾ ಬಂದಿದ್ದೇವೆ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಹಾಗೂ ಲಕ್ಷ್ಮೀ ಸಹಿತ ನಾರಾಯಣ ದೇವರ ಕೃಪಾಕಟಾಕ್ಷ ಸದಾ ಇರಲಿ. ನಿಮ್ಮೆಲ್ಲರ ಮನೋ ಇಚ್ಛೆ ನೆರವೇರಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರು ನುಡಿದರು.
ಆ. 24 ರಂದು ಅಪರಾಹ್ನ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ನಡೆದ 10 ನೇ ವಾರ್ಷಿಕ ಶ್ರೀ ವರ ಮಹಾಲಕ್ಷ್ಮೀ ವ್ರತದ ಪೂಜೆಯ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿ ಅನುಗ್ರಹಿಸಿದರು. ಪೂಜೆಯಲ್ಲಿ ಸುಮಾರು 300 ಮಂದಿ ಮಹಿಳೆಯರು ಭಾಗವಹಿಸಿದ್ದರು. ಗುರುಪ್ರಸಾದ್ ಭಟ್ ಅವರು ಪೂಜೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಪೂಜೆಗೈಯುವ ವಿಧಿ-ವಿಧಾನಗಳನ್ನು ತಿಳಿಸಿದರು. ಮಹಿಳೆಯರು ಪೂಜೆ ನೆರವೇರಿಸಿದರು. ಕೊನೆಯಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಭಾಗವಹಿಸಿದ ಎಲ್ಲ ಭಕ್ತಾದಿಗಳಿಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ಸಮಿತಿಯ ಸದಸ್ಯೆ ರಾಧಾ ಎಸ್. ಪೂಜಾರಿ ಅವರ ವತಿಯಿಂದ ಫಲಾಹಾರ ವಿತರಿಸಲಾಯಿತು.
ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ಪೂಜೆಯಲ್ಲಿ ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ಸದಸ್ಯರು, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.