ಅಲ್ ರಯಾನ್: ಸೋಮವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ದ.ಕೊರಿಯ ಎದುರು ಘಾನಾ ಗೆಲುವು ಸಾಧಿಸಿದೆ.
3-2 ಗೋಲುಗಳ ರೋಚಕ ಗೆಲುವು ಘಾನಾವನ್ನು ನಾಕೌಟ್ ಪೈಪೋಟಿಯಲ್ಲಿ ಉಳಿಸಿದೆ. ಇನ್ನೊಂದು ಕಡೆ ಸೋತಿರುವುದರಿಂದ ದ.ಕೊರಿಯ ಬಾಗಿಲು ಬಹುತೇಕ ಬಂದ್ ಆಗಿದೆ.
ಈ ಎರಡೂ ತಂಡಗಳಿಗೆ ಉಳಿದಿರುವುದು ತಲಾ ಒಂದು ಪಂದ್ಯ ಮಾತ್ರ. ಘಾನಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮೇಲೇರುವ ಅವಕಾಶವಿದೆ. ದ.ಕೊರಿಯ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತ ಕಷ್ಟವಿದೆ.
ನೀವು ಈ ವರದಿಯನ್ನು ಓದುವ ಹೊತ್ತಿಗೆ ಪೋರ್ಚುಗಲ್ ಮತ್ತು ಉರುಗ್ವೆ ನಡುವೆ ಸೋಮವಾರ ತಡರಾತ್ರಿ ಪಂದ್ಯವೊಂದು ಮುಗಿದಿರುತ್ತದೆ. ಇಲ್ಲಿನ ಫಲಿತಾಂಶ ಬಹಳ ಮುಖ್ಯ. ಈ ಫಲಿತಾಂಶದ ಮೂಲಕ ಎಚ್ ಗುಂಪಿನಲ್ಲಿ ಅಗ್ರಸ್ಥಾನಿ ತಂಡ ಯಾವುದೆಂದು ನಿರ್ಣಯಕ್ಕೆ ಬರಬಹುದು.
Related Articles
ಹಾಗೆಯೇ ಪೋರ್ಚುಗಲ್ ಮತ್ತು ಉರುಗ್ವೆ ನಡುವೆ ಸೋತ ತಂಡದೊಂದಿಗೆ ಘಾನಾ ಇನ್ನೊಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿ ಬರಬಹುದು.
ನಿಕಟ ಕಾದಾಟ: ಪಂದ್ಯದ 24ನೇ ನಿಮಿಷದಲ್ಲಿ ಘಾನಾದ ರಕ್ಷಣಾ ಆಟಗಾರ ಮೊಹಮ್ಮದ್ ಸಲಿಸು ಆಕರ್ಷಕ ಗೋಲು ಬಾರಿಸಿದರು. 34ನೇ ನಿಮಿಷದಲ್ಲಿ ಮೊಹಮ್ಮದ್ ಕುಡುಸ್ ಇನ್ನೊಂದು ಗೋಲು ಬಾರಿಸಿ, ಘಾನಾ ಸ್ಥಿತಿಯನ್ನು ಮಜಬೂತುಗೊಳಿಸಿದರು.
ದ್ವಿತೀಯಾರ್ಧದಲ್ಲಿ ಅಂದರೆ 58ನೇ ನಿಮಿಷದಲ್ಲಿ ದ.ಕೊರಿಯ ತಿರುಗಿಬಿತ್ತು. ಸ್ಟ್ರೈಕರ್ ಚೊ ಗೆ ಸಂಗ್ ಗೋಲು ಬಾರಿಸಿ, ಅಂತರ 1-2ಕ್ಕಿಳಿಸಿದರು. 61ನೇ ನಿಮಿಷದಲ್ಲಿ ಸಂಗ್ ಮತ್ತೂಮ್ಮೆ ಅಬ್ಬರಿಸಿ ಗೋಲುಗಳನ್ನು 2-2ಕ್ಕೆ ಸಮಗೊಳಿಸಿದರು!
ದ.ಕೊರಿಯ ಈ ಸಂಭ್ರಮದಲ್ಲಿದ್ದಾಗಲೇ ಘಾನಾ ಮತ್ತೊಂದು ಹೊಡೆತ ನೀಡಿತು. 68ನೇ ನಿಮಿಷದಲ್ಲಿ ಮಿಡ್‌ಫಿಲ್ಡರ್ ಮೊಹಮ್ಮದ್ ಕುಡುಸ್ ಇನ್ನೊಂದು ಗೋಲು ಬಾರಿಸಿದರು! ಅಲ್ಲಿಗೆ ಘಾನಾ 3-2ಕ್ಕೆ ಗೋಲಿನ ಅಂತರವನ್ನು ಹೆಚ್ಚಿಸಿಕೊಂಡಿತು. ಅಲ್ಲಿಂದ ನಂತರ ಇತ್ತಂಡಗಳಿಗೆ ಗೋಲನ್ನು ದಾಖಲಿಸಲು ಸಾಧ್ಯವೇ ಆಗಲಿಲ್ಲ.