ದಿಸ್ಪುರ್: ಮೊದಲೆಲ್ಲಾ ಪೊಲೀಸರಿಗೂ ಡೊಳ್ಳು ಹೊಟ್ಟೆಗೂ ಅದೇನೋ ಸಂಬಂಧವಿದ್ದಂತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೀಗ ಪೊಲೀಸ್ ಅಧಿಕಾರಿಗಳೂ ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸಹೋದ್ಯೋಗಿಗಳಿಗೂ ಅದೇ ರೀತಿ ಇರುವಂತೆ ಪ್ರೇರಣೆಯನ್ನೂ ಮಾಡುತ್ತಿದ್ದಾರೆ.
ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂನ ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳಿಗೆ ʻ3 ತಿಂಗಳೊಳಗೆ ಫಿಟ್ ಆಗಿ ಇಲ್ಲಾ ರಾಜೀನಾಮೆ ನೀಡಿʼ ಎಂದು ಖಡಕ್ ಸೂಚನೆ ನೀಡಿದ್ದಾರೆ.
ʻನಾವು ಅಸ್ಸಾಂನ ಐಪಿಎಸ್ ಅಧಿಕಾರಿಗಳು ಸೇರಿ ಎಲ್ಲಾ ಪೋಲಿಸರಿಗೆ 3 ತಿಂಗಳ ಕಾಲಾವಕಾಶ ನೀಡುತ್ತೇವೆ. ಆಗಸ್ಟ್ 15 ರ ಬಳಿಕ ನಡೆಯಲಿರುವ ದೈಹಿಕ ಪರೀಕ್ಷೆಯಲ್ಲಿ ನಮ್ಮ ಸಿಬ್ಬಂದಿಗಳು ತೇರ್ಗಡೆಗೊಳ್ಳಬೇಕಾಗಿದೆʼ ಎಂದು ಅಸ್ಸಾಂ ಪೊಲೀಸ್ DG ಜಿ.ಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.
3 ತಿಂಗಳ ಒಳಗಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳದ ಪೊಲೀಸರನ್ನು ವಿಆರ್‌ಎಸ್ ರೀತಿಯಲ್ಲಿ ಮನೆಗೆ ಕಳುಹಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ 70,000 ಮಂದಿ ಸಿಬ್ಬಂದಿಗಳಿದ್ದಾರೆ.
ಇದನ್ನೂ ಓದಿ: ದೆಹಲಿಯ ಮೃಗಾಲಯದಲ್ಲಿ 18 ವರ್ಷಗಳ ಬಳಿಕ ಮರಿಗಳಿಗೆ ಜನ್ಮ ನೀಡಿದ ಹುಲಿ