ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ(ಅಕ್ಟೋಬರ್-ಡಿಸೆಂಬರ್) ದೇಶದ ಜಿಡಿಪಿ ಶೇ. 8.4ರಷ್ಟು ಭರ್ಜರಿ ಪ್ರಗತಿ ಕಂಡಿದೆ. ಮುಖ್ಯವಾಗಿ ಉತ್ಪಾದನೆ, ಗಣಿ, ಕೋರೆ ಮತ್ತು ನಿರ್ಮಾಣ ವಲಯದಲ್ಲಿ ಉತ್ತಮ ಸಾಧನೆಯೇ ಇದಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಗುರುವಾರ ಬಿಡುಗಡೆಗೊಳಿಸಿದ ವರದಿಯ ಪ್ರಕಾರ 2022-23ರ ಮೂರನೇ ತ್ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 4.3ರಷ್ಟಿತ್ತು. 2023-24ರ ಇದೇ ಅವಧಿಯಲ್ಲಿ ಅದು ಶೇ. 8.4ರಷ್ಟು ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭರ್ಜರಿ ಬೆಳವಣಿಗೆಯಾಗಿದೆ.
ಆರ್ಥಿಕ ತಜ್ಞರು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದ್ದರು.ಆದರೆ ನಿರೀಕ್ಷೆಗೂ ಮೀರಿ ಬೆಳವಣಿಗೆ ಆಗಿದೆ. ಇದರಿಂದಾಗಿ 2023-24ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಜಿಡಿಪಿ ಶೇ. 7.6ರಷ್ಟು ತಲುಪುವ ಅಂದಾಜಿದೆ. ಪ್ರಮುಖವಾಗಿ 2023-24ರ ಮೂರನೇ ತ್ತೈಮಾಸಿಕ ದಲ್ಲಿ ಉತ್ಪಾದನ ವಲಯದ ಜಿಡಿಪಿ ಶೇ. 11.6ರಷ್ಟು ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಕ್ಷೇತ್ರದ ಜಿಡಿಪಿ ಶೇ. 4.8ರಷ್ಟಿತ್ತು.
2023-24ರ ಮೂರನೇ ತ್ತೈಮಾಸಿಕದಲ್ಲಿ ಶೇ. 8.4ರಷ್ಟು ಜಿಡಿಪಿ ಬೆಳವಣಿಗೆಯು ದೇಶದ ಆರ್ಥಿಕತೆಯ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರುತ್ತದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿವೆ. ಇದು 140 ಕೋಟಿ ಭಾರತೀಯರು ಉತ್ತಮ ಜೀವನ ನಡೆಸುವಂತಾಗಲು ಮತ್ತು ವಿಕಸಿತ ಭಾರತ ರಚಿಸಲು ಸಹಕಾರಿಯಾಗಿದೆ.
– ನರೇಂದ್ರ ಮೋದಿ, ಪ್ರಧಾನಿ