ಮುಂಬೈ: ರಾಹುಲ್ ದ್ರಾವಿಡ್ ಅವರಿಂದ ತೆರವಾಗಿದ್ದ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ (Head Coach) ಸ್ಥಾನಕ್ಕೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರನ್ನು ನೇಮಕ ಮಾಡಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತ ಘೋಷಣೆ ಮಾಡಿದ್ದಾರೆ.
ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವರು ನೇಮಕವಾಗುವುದು ಬಹುತೇಕ ಖಚಿತವಾಗಿತ್ತು. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿತ್ತು. ಇದೀಗ ಜಯ್ ಶಾ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಯ್ ಶಾ ಅವರು, ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತದೆ. ಆಧುನಿಕ-ದಿನದ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ ಮತ್ತು ಗೌತಮ್ ಈ ಬದಲಾಗುತ್ತಿರುವ ಕ್ರಿಕೆಟ್ ನ್ನು ಹತ್ತಿರದಿಂದ ನೋಡಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಭಾರತೀಯ ಕ್ರಿಕೆಟನ್ನು ಮುನ್ನಡೆಸಲು ಗೌತಮ್ ಆದರ್ಶ ವ್ಯಕ್ತಿ ಎಂದು ನನಗೆ ವಿಶ್ವಾಸವಿದೆ. ಅವರು ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ಬಿಸಿಸಿಐ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.
2003ರಿಂದ 2016ರವರೆಗೆ ಭಾರತೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಗೌತಮ್ ಗಂಭೀರ್ ಅವರು ಆರಂಭಿಕರಾಗಿ ಮೂರು ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದವರು. 2007 ಮತ್ತು 2011ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡದ ಪರ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿರುವ ಗೌತಮ್, ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕರಾಗಿ ಮೂರು ಬಾರಿ ಕಪ್ ಗೆಲ್ಲಿಸಿದ್ದರು. 2024ರಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು.