ತಿರುವನಂತಪುರಂ(ಕೇರಳ): ಭಾರತದ ದಕ್ಷಿಣದ ತುದಿಯಲ್ಲಿರುವ ವಿಝಿಂಜಮ್ ನಲ್ಲಿ ನಿರ್ಮಾಣಗೊಳ್ಳಲಿರುವ ಬಿಲಿಯನೇರ್ ಗೌತಮ್ ಅದಾನಿ ಅವರ ಬೃಹತ್ ಬಂದರು ನಿರ್ಮಾಣ ಕಾಮಗಾರಿ ಮುಂದುವರಿಸಲು ಕರಾವಳಿ ಪ್ರದೇಶದ ಕ್ರಿಶ್ಚಿಯನ್ ಮೀನುಗಾರ ಸಮುದಾಯ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ತಡೆಯೊಡ್ಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ಮೂರನೇ ಟ್ರಿಪ್ ಜನವರಿಯಲ್ಲಿ: ಸಚಿವೆ ಜೊಲ್ಲೆ
ವಿಝಿಂಜಮ್ ಪ್ರದೇಶ ಕೇರಳದ ತಿರುವಂನತಪುರಂನ ನಗರ ಪ್ರದೇಶದ ವ್ಯಾಪ್ತಿಯಲ್ಲಿದೆ. ವಿಝಿಂಜಮ್ ದಕ್ಷಿಣ ತ್ರಿವೆಂಡ್ರಮ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎನ್ ಎಚ್ 66ಗೆ 16 ಕಿಲೋ ಮೀಟರ್ ದೂರದಲ್ಲಿದೆ.
ವಿಝಿಂಜಮ್ ನಲ್ಲಿ ಅದಾನಿ ನಿರ್ಮಾಣ ಮಾಡುತ್ತಿರುವ ಭಾರತದ ಮೊದಲ ಕಂಟೈನರ್ ಟ್ರಾನ್ಸ್ ಶಿಪ್ ಮೆಂಟ್ ಬಂದರು ಇದಾಗಿದೆ. ಇದು 900 ಮಿಲಿಯನ್ ಡಾಲರ್ (ಅಂದಾಜು 73 ಸಾವಿರ ಕೋಟಿ) ಮೊತ್ತದ ಬೃಹತ್ ಯೋಜನೆಯಾಗಿದೆ.
ಅನಿರ್ದಿಷ್ಟ ಅಹೋರಾತ್ರಿ ಪ್ರತಿಭಟನೆ v/s ಬಂದರು ಪರ ಹೋರಾಟ
ಅದಾನಿ ಗ್ರೂಪ್ ನ ಈ ಬೃಹತ್ ಬಂದರು ಯೋಜನೆಗೆ ಕ್ರಿಶ್ಚಿಯನ್ ಮೀನುಗಾರರ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. ಮತ್ತೊಂದೆಡೆ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬೆಂಬಲಿಗರು ಹಾಗೂ ಹಿಂದೂ ಸಂಘಟನೆಗಳು ಬಂದರು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಪ್ರತಿಭಟನಾ ನಿರತ ಜನರಿಗಿಂತ ಸುಮಾರು 300 ಪೊಲೀಸರು ಸ್ಥಳದಲ್ಲಿ ಸೂಕ್ಷ್ಮ ಕಣ್ಗಾವಲು ಇಡುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ವರದಿ ವಿವರಿಸಿದೆ. ಅದಾನಿ ಗ್ರೂಪ್ ನ ಬಂದರು ಕಾಮಗಾರಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಬೇಕು ಎಂಬ ಕೇರಳ ಹೈಕೋರ್ಟ್ ಆದೇಶದ ನಡುವೆಯೂ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಂದರು ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಉದ್ವಿಗ್ನತೆ ತಲೆದೋರಬಹುದು ಎಂಬ ಭಯ ಪೊಲೀಸ್ ಇಲಾಖೆಯದ್ದಾಗಿದೆ ಎಂಬುದಾಗಿ ವರದಿ ವಿವರಿಸಿದೆ.
ಮೀನುಗಾರರ ಆರೋಪವೇನು?
2015ರಿಂದ ನಿರ್ಮಾಣಗೊಳ್ಳುತ್ತಿರುವ ಬಂದರು ಕಾಮಗಾರಿಯಿಂದಾಗಿ ಕರಾವಳಿ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಸವೆತಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಈ ಯೋಜನೆಯನ್ನು ಮುಂದುವರಿಸಿದಲ್ಲಿ ಈ ಪ್ರದೇಶದಲ್ಲಿರುವ ಸುಮಾರು 56,000 ಮೀನುಗಾರರ ಸಮುದಾಯದ ಜೀವನೋಪಾಯಕ್ಕೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಬಂದರು ನಿರ್ಮಾಣ ವಿಚಾರದಲ್ಲಿ ಕೇರಳ ಸರ್ಕಾರ ಮಧ್ಯಪ್ರವೇಶಿಸಿ, ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವ ಆದೇಶ ನೀಡಿ, ಈ ಯೋಜನೆಯಿಂದ ಕರಾವಳಿ ಪ್ರದೇಶದ ಪರಿಸರದ ಮೇಲೆ ಬೀರುವ ಪರಿಣಾಮದ ಮೇಲೆ ಅಧ್ಯಯನ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅದಾನಿ ಗ್ರೂಪ್ ವಾದವೇನು…
ಬೃಹತ್ ಬಂದರು ಯೋಜನೆಗೆ ವ್ಯಕ್ತವಾಗಿರುವ ವಿರೋಧದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅದಾನಿ ಗ್ರೂಪ್, ಈ ಯೋಜನೆಯು ಎಲ್ಲಾ ಕಾನೂನುಗಳಿಗೆ ಅನುಗುಣವಾಗಿ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲ ಇತ್ತೀಚೆಗಿನ ವರ್ಷಗಳಲ್ಲಿ ಐಐಟಿ ಹಾಗೂ ಇತರ ಸಂಸ್ಥೆಗಳು ನಡೆಸಿದ ಹಲವು ಅಧ್ಯಯನಗಳ ಪ್ರಕಾರ, ಯೋಜನೆಯಿಂದ ಕರಾವಳಿ ತೀರ ಪ್ರದೇಶದ ಸವೆತಕ್ಕೆ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂಬ ಆರೋಪವನ್ನು ತಳ್ಳಿಹಾಕಿರುವುದಾಗಿ ತಿಳಿಸಿದೆ.