Advertisement

ಗೌರಿ ಹತ್ಯೆ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

03:41 PM Oct 03, 2017 | Team Udayavani |

ಉಪ್ಪಿನಂಗಡಿ : ಗೌರಿ ಲಂಕೇಶ್‌ ಅವರನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಉಪ್ಪಿನಂಗಡಿಯ ಪ್ರಗತಿಪರ ವೇದಿಕೆಯ ವತಿಯಿಂದ ಇಲ್ಲಿನ ಬಸ್‌ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಗೌರಿ ಲಂಕೇಶ್‌ ಹತ್ಯಾ ವಿರೋಧಿ ವೇದಿಕೆಯು ದೇಶವ್ಯಾಪಿ ಜರಗಿದ ಪ್ರತಿಭಟನೆ ನಡೆಸುತ್ತಿದ್ದು, ಅದರ ಅಂಗವಾಗಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಉಪ್ಪಿನಂಗಡಿ ಮಾಲೀಕ್‌ ದಿನಾರ್‌ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಾಫಾ ಕೆಂಪಿ, ಹಿಂಸಾರಹಿತ ವಿಚಾರಧಾರೆಯ ಪ್ರತಿಪಾದಕರಾಗಿ, ಅದನ್ನು ಜೀವನದುದ್ದಕ್ಕೂ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದ ಮಾತೃ ಹೃದಯ ಗೌರಿ ಲಂಕೇಶ್‌ರದ್ದಾಗಿತ್ತು. ಆದರೆ ಅವರು ಯಾವುದನ್ನು ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದರೋ ಕೊನೆಗೆ ಅದೇ ಹಿಂಸೆಗೆ ಬಲಿಯಾಗಿರುವುದು ದೇಶದ ದುರಂತ. ಕ್ರೂರ ಮನೋಸ್ಥಿತಿಯ ಹಂತಕರು ಗೌರಿಯೆಂಬ ಶರೀರವನ್ನು ಕೊಂದಿರಬಹುದು. ಆದರೆ ಅವರು ಲಕ್ಷಾಂತರ ಗೌರಿಗಳಲ್ಲಿ ಹುಟ್ಟು ಹಾಕಿದ ವಿಚಾರಧಾರೆಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ರಾಜ್ಯ ಸರಕಾರವು ಯಾವುದೇ ಒತ್ತಡಗಳಿಗೆ ಮಣಿಯದೆ ಅವರ ಹತ್ಯಾ ಆರೋಪಿಗಳನ್ನು ತತ್‌ಕ್ಷಣ ಬಂಧಿಸಿ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ತನ್ಸೀಫ್  ಬಿ.ಎಂ. ಮಾತನಾಡಿ, ಸಮಾನತೆ ಮತ್ತು ಸತ್ಯವನ್ನು ಪ್ರತಿಪಾದಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಗೌರಿ ಲಂಕೇಶ್‌ರಿಂದಾಗಿತ್ತು. ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಅವರಲ್ಲಿ ಮೌಡ್ಯತೆ ಬಿತ್ತಿ ಅವರನ್ನು ಶೋಷಿಸುತ್ತಿದ್ದವರ ವಿರುದ್ಧದ ಧ್ವನಿಯಾಗಿ ಗೌರಿ ಅವರು ಇದ್ದರು. ಆರೋಪಿಗಳನ್ನು ಶೀಘ್ರ ಬಂಧಿಸಿ, ಉಗ್ರ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುರ್ರಹ್ಮಾನ್‌, ವರ್ತಕರ ಸಂಘದ ಕಾರ್ಯದರ್ಶಿ ಯುನಿಕ್‌ ಅಬ್ದುರ್ರಹ್ಮಾನ್‌, ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಯು.ಟಿ. ತೌಸೀಫ್, ಪ್ರಗತಿಪರ ವೇದಿಕೆಯ ಶಬೀರ್‌ ಕೆಂಪಿ, ಇಬ್ರಾಹೀಂ ಪಿಲಿಗೂಡು, ಶಹೀದ್‌ ನಂದಾವರ, ಅಮ್ಮಿ ಸನ್ಮಾನ್‌, ಝಬೈರ್‌ ಕೊಯಿಲ , ರಿಯಾಝ್ ಕಡವಿನ ಬಾಗಿಲು, ಅಝೀಝ್ ನಿನ್ನಿಕಲ್ಲ್ , ಆಶಿಕ್‌ ಅರಫಾ, ಆಶಿಕ್‌ ರಾಮನಗರ, ಶಲೂಲ್‌ ಯು.ಟಿ., ಇಬ್ರಾಹಿಂ ಆಚಿ ಮತ್ತಿತರರು ಪಾಲ್ಗೊಂಡಿದ್ದರು.ಪ್ರಗತಿಪರ ವೇದಿಕೆಯ ಇರ್ಷಾದ್‌ ಯು.ಟಿ. ಉಪ್ಪಿನಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next