Advertisement

ಬ್ಯಾರೇಜ್‌ಗಳಿಗಿಲ್ಲ ಗೇಟ್‌; ನೀರು ವ್ಯರ್ಥ ಪೋಲು

02:36 PM Dec 24, 2021 | Team Udayavani |

ಚಿಂಚೋಳಿ: ತಾಲೂಕಿನ ಮುಲ್ಲಾಮಾರಿ ನದಿಗೆ ನಿರ್ಮಿಸಿದ ಬ್ಯಾರೇಜ್‌ಗಳಿಗೆ ಗೇಟ್‌ಗಳನ್ನು ಅಳವಡಿಸದೇ ಇರುವುದರಿಂದ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಹೊಲಗಳಲ್ಲಿನ ಬೆಳೆಗಳಿಗೆ ಸಮರ್ಪಕ ನೀರು ಸಿಗುತ್ತಿಲ್ಲವೆಂದು ಗರಗಪಳ್ಳಿ ಗ್ರಾಮದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಮುಲ್ಲಾಮಾರಿ ನದಿಗೆ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಗರಗಪಳ್ಳಿ, ಜಟ್ಟೂರ, ಸೇಡಂ ತಾಲೂಕಿನ ಲಾವಾಡಿ, ಎಡ್ಡಳ್ಳಿ, ಮೀನ ಹಾಬಾಳ, ಕಾಚೂರ, ಕುಕ್ಕುಂದಾ ಗ್ರಾಮಗಳ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಎಲ್ಲ ಬ್ಯಾರೇಜಗಳಿಗೆ ಜಲ ಸಂಪನ್ಮೂಲ ಇಲಾಖೆಯಿಂದ ನವೆಂಬರ್‌ ತಿಂಗಳಲ್ಲಿಯೇ ಗೇಟ್‌ ಅಳವಡಿಸಿ ನೀರಿನ ಸಂಗ್ರಹಣೆ ಮಾಡುವ ಕಾರ್ಯ ನಡೆಯಬೇಕಿತ್ತು. ಆದರೆ ಇಲಾಖೆ ಅಧಿಕಾರಿಗಳ ಬೇಜಾವ್ದಾರಿತನದಿಂದ ಎಲ್ಲ ಬ್ಯಾರೇಜಗಳಿಗೆ ಗೇಟ್‌ ಅಳವಡಿಸಿಲ್ಲ. ಹೀಗಾಗಿ ವ್ಯರ್ಥವಾಗಿ ನೀರು ಹರಿಯುತ್ತಿದೆ.

ಮುಲ್ಲಾಮಾರಿ ನದಿಗೆ ನಿರ್ಮಿಸಿದ ಬ್ಯಾರೇಜ್‌ ಗಳಲ್ಲಿನ ನೀರಿನ ಸಂಗ್ರಹಣೆ ಆಧಾರದ ಮೇಲೆ ನದಿ ದಡದಲ್ಲಿರುವ ರೈತರು ತಮ್ಮ ಹಿಂಗಾರು ಬೆಳೆ, ನೀರಾವರಿ ಬೆಳೆ ಬೆಳೆಯುತ್ತಾರೆ. ಪ್ರಸಕ್ತ ಸಾಲಿನಲ್ಲಿ ಕಡಲೆ, ಜೋಳ, ನೀರಾವರಿ ಬೆಳೆಗಳಾದ ಬಾಳೆ, ಅರಶಿಣ, ತರಕಾರಿ ಬೆಳೆಗಳು, ಉಳ್ಳಾಗಡ್ಡಿ, ಕಬ್ಬು ಬೆಳೆದಿದ್ದಾರೆ. ಆದರೆ ನದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗರಗಪಳ್ಳಿ ಬ್ಯಾರೇಜ್‌ಗೆ ಗೇಟ್‌ ಅಳವಡಿಸಬೇಕೆಂದು ಎಂದು ಗರಗಪಳ್ಳಿ ಗ್ರಾಮದ ರೈತರು ಮನವಿ ಮಾಡಿದ್ದಾರೆ.

ಚಿಂಚೋಳಿ ತಾಲೂಕಿನ ಬಾವನಗುಡಿ, ಶಿವರಾಮ ನಾಯಕ ತಾಂಡಾ, ಕೊಟಗಾ, ಹೊಸಳ್ಳಿ, ಶಾದೀಪುರ ತಾಂಡಾದಲ್ಲಿ ಬ್ಯಾರೇಜ್‌ ಗಳಿಗೆ ಗೇಟ್‌ ಅಳವಡಿಸಲಾಗಿದೆ. ಆದರೆ ಮುಲ್ಲಾಮಾರಿ ನದಿಯ ಬ್ಯಾರೇಜ್‌ಗೆ ಗೇಟ್‌ ಅಳವಡಿಸಲು ಇಲಾಖೆಯಿಂದ ಪ್ರತಿಯೊಂದು ಬ್ಯಾರೇಜ್‌ಗೆ 60ರಿಂದ 70 ಸಾವಿರ ರೂ.ಗಳ ಟೆಂಡರ್‌ ಕರೆಯಲಾಗಿದೆ. ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆಯಿಂದಾಗಿ ಗೇಟ್‌ ಅಳವಡಿಸುವ ಕಾರ್ಯಕ್ಕೆ ವಿಳಂಬವಾಗಿತ್ತು. ಇನ್ಮುಂದೆ ಶೀಘ್ರವೇ ಗೇಟ್‌ ಅಳವಡಿಸಲಾಗುವುದು. -ಶಿವಶರಣಪ್ಪ ಕೇಶ್ವಾರ, ಎಇಇ, ಜಲ ಸಂಪನ್ಮೂಲ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next