Advertisement

USA: ಅಮೆರಿಕ ಸಂಸತ್‌ ಸ್ಪೀಕರ್‌ಗೇ ಗೇಟ್‌ಪಾಸ್‌- 1910ರ ಬಳಿಕ ಮೊದಲ ಬಾರಿಗೆ ಇಂಥ ಬೆಳವಣಿಗೆ

08:59 PM Oct 04, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಸಂಸತ್‌ನ ಕೆಳಮನೆ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪೀಕರ್‌ ಕೆವಿನ್‌ ಮೆಕಾರ್ತಿ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಮುಂದಿನ ವರ್ಷ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

ವಿಶೇಷವೆಂದರೆ ಅಮೆರಿಕದ ಪ್ರತಿಪಕ್ಷ ರಿಪಬ್ಲಿಕನ್‌ ಪಕ್ಷದಲ್ಲಿನ ಭಿನ್ನಮತವೇ ಸ್ಪೀಕರ್‌ ಸ್ಥಾನದಲ್ಲಿದ್ದ ಮೆಕಾರ್ತಿ ಅವರನ್ನು ಹುದ್ದೆಯಿಂದ ತೆಗೆದು ಹಾಕುವ ನಿಟ್ಟಿನಲ್ಲಿ ಮತದಾನ ನಡೆಯುವ ಪ್ರಸಂಗ ನಡೆದಿದೆ. ಮೆಕಾರ್ತಿಯವರದ್ದೇ ಪಕ್ಷದ ಎಂಟು ಮಂದಿ ಸಂಸದರು ಅವರ ವಿರುದ್ಧವೇ ಮತಹಾಕಿದ್ದಾರೆ. 1910ರ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್‌ನ ಕೆಳಮನೆಯಲ್ಲಿ ಇಂಥ ಒಂದು ಅಚ್ಚರಿ ಹುಟ್ಟಿಸುವ ಬೆಳವಣಿಗೆ ನಡೆದಿದೆ.

ಕಾರಣವೇನು?
ಫ್ಲೋರಿಡಾದ ಪ್ರಭಾವಿ ನಾಯಕ, ರಿಪಬ್ಲಿಕನ್‌ ಪಕ್ಷದ ಸಂಸದ ಮ್ಯಾಟ್‌ ಗೇಟ್ಜ್ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂಬ ಚರ್ಚೆಗಳು ಆ ದೇಶದಲ್ಲಿ ನಡೆದಿವೆ. ಅ.1ರಂದು ಅಮೆರಿಕ ಸರ್ಕಾರ ಆರ್ಥಿಕ ಬಿಕ್ಕಟ್ಟಿನಿಂದ (ಶಟ್‌ ಡೌನ್‌) ಪಾರಾಗುವ ನಿಟ್ಟಿನಲ್ಲಿ ಕೆವಿನ್‌ ಮೆಕಾರ್ತಿ ಆಡಳಿತ ಪಕ್ಷ ಡೆಮಾಕ್ರಾಟ್‌ ಪಕ್ಷದ ಜತೆಗೆ ಡೀಲ್‌ ಮಾಡಿಕೊಂಡಿದ್ದಾರೆ. ಇದರ ಜತೆಗೆ ಉಕ್ರೇನ್‌ಗೆ ನೆರವು ನೀಡುವ ವಿಚಾರದಲ್ಲಿಯೂ ಕೂಡ ಅಮೆರಿಕ ಅಧ್ಯಕ್ಷರ ಜತೆ ಸೇರಿಕೊಂಡು ಸ್ಪೀಕರ್‌ ಹುದ್ದೆಯಲ್ಲಿದ್ದ ಮೆಕಾರ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ, ಎಂಟು ಮಂದಿ ಸಂಸದರ ಜತೆಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ. ಒಟ್ಟು 216-210 ಮತಗಳ ಅಂತರದಲ್ಲಿ ಕೆವಿನ್‌ ಹುದ್ದೆ ಕಳೆದುಕೊಂಡಿದ್ದಾರೆ.

ಮತ್ತೆ ಸ್ಪರ್ಧಿಸುವುದಿಲ್ಲ:
ಸ್ಪೀಕರ್‌ ಹುದ್ದೆಗೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸಂಸತ್‌ನ ಕೆಳಮನೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಮಾತನಾಡಿದ ಕೆವಿನ್‌ ಮೆಕಾರ್ತಿ ಹೇಳಿದ್ದಾರೆ. ಸ್ಪೀಕರ್‌ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆ ಅ.10ರಂದು ಮತ್ತೆ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಅ.11ರಂದು ಸ್ಪೀಕರ್‌ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಮತದಾನ ನಡೆಸಲೂ ತೀರ್ಮಾನಿಸಲಾಗಿದೆ. ನಿಕಟಪೂರ್ವ ಸ್ಪೀಕರ್‌ ಹಾಲಿ ಅಧ್ಯಕ್ಷ ಬೈಡೆನ್‌ ಪುತ್ರ ಹಂಟರ್‌ ಬೈಡೆನ್‌ ವಿರುದ್ಧ ತನಿಖೆಗೆ ಕೂಡ ಆದೇಶ ನೀಡಿದ್ದರು.

ಸ್ಪೀಕರ್‌ ಹುದ್ದೆಗೆ ಡೊನಾಲ್ಡ್‌ ಟ್ರಂಪ್‌? 
ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೆಳಮನೆಯ ಸ್ಪೀಕರ್‌ ಹುದ್ದೆಗೆ ನೇಮಕ ಮಾಡುವ ಬಗ್ಗೆ ರಿಪಬ್ಲಿಕನ್‌ ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಈ ಬಗ್ಗೆ ಟೆಕ್ಸಾಸ್‌ನ ಸಂಸದ ಟೋರಿ ನೆಲ್ಸ್‌ ಮಾತನಾಡಿ ಈ ವಾರದಲ್ಲಿ ಮತ್ತೂಮ್ಮೆ ಸದನ ಸಮಾವೇಶಗೊಂಡಾಗ ಈ ಬಗ್ಗೆ ನನ್ನ ವಾದ ಮಂಡಿಸುತ್ತೇನೆ. ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ದೇಶಕ್ಕೆ ಬಲುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next