ಹಾಸನ: ಪ್ರಧಾನಿ ಮೋದಿ ಅವರು 5 ವರ್ಷದಲ್ಲೇ ಬಹುದೊಡ್ಡ ಸಾಧನೆ ಮಾಡಿದ್ದೇನೆ ಎಂದು ಮೋದಿ ಅವರು ಬೀಗುತ್ತಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದವರು ಏನೂ ಮಾಡಿಯೇ ಇಲ್ಲವೇ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತರಾಟೆಗೆ ತೆಗೆದುಕೊಂಡರು.
ಹೊಳೆನರಸೀಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಘೋಷಣೆಯಾದ ದಿನ ಜವಾಹರ್ ಲಾಲ್ ನೆಹರೂ ಅವರು ಪ್ರಪಂಚವೆಲ್ಲಾ ಮಲಗಿದೆ. ಆದರೆ ಭಾರತ ಎದ್ದಿದೆ ಎಂದಿದ್ದರು. ದೇಶದ ಮೊದಲ ಪ್ರಧಾನಿಯಾಗಿ ನೆಹರೂ ಅವರೂ ಕೊಡುಗೆ ನೀಡಿದ್ದಾರೆ. ಆದರೆ ನರೇಂದ್ರ ಮೋದಿಯವರಿಗೆ ಎಲ್ಲವನ್ನೂ ನಾನೇ ಮಾಡಿದೆ ಎಂಬ ಗರ್ವ ಬೇಡ. ಗರ್ವಭಂಗ ಆಗುತ್ತದೆ ಎಂದೂ ಎಚ್ಚರಿಸಿದರು.
ಮುಖ್ಯಮಂತ್ರಿ ಸ್ಥಾನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೇವರು ಕೊಟ್ಟ ವರ. ಜೊತೆಗೆ ಶಿಕ್ಷೆಯೂ ಇದೆ. ಅತ್ಯಂತ ನೋವಿನಿಂದ ಮುಖ್ಯಮಂತ್ರಿಯಾಗಿ ದ್ದಾರೆ. ರೈತರ ಕೃಷಿ ಸಾಲ 44 ಸಾವಿರ ಕೋಟಿ ರೂ. ಮನ್ನಾ ಮಾಡುವುದು ಅಷ್ಟು ಸುಲಭವಲ್ಲ. ಆದರೂ ಪ್ರಧಾನಿ ನರೇಂದ್ರಮೋದಿ ಅವರು ಸಾಲಮನ್ನಾದ ಬಗ್ಗೆ ವ್ಯಂಗ್ಯವಾಡುತ್ತಾರೆ.
ನನ್ನನ್ನೂ ಸೋ ಕಾಲ್ಡ್ ಸನ್‌ಆಫ್ ದಿ ಸಾಯಿಲ್ ಎಂದು ವ್ಯಂಗ್ಯವಾಡುತ್ತಾರೆ. ಮಣ್ಣಿನ ಮಗ ಎಂದು ನಾನು ಘೋಷಿಸಿಕೊಂಡಿಲ್ಲ ಜನರೇ ನನ್ನನ್ನು ಮಣ್ಣಿನ ಮಗ ಎಂದು ಕರೆದಿದ್ದಾರೆ. ಅದನ್ನು ಒಪ್ಪಿಕೊಂಡಿಯೂ ಇದ್ದಾರೆ. ಅದಕ್ಕೆ ವ್ಯಂಗ್ಯ ಬೇಡ. ಪ್ರಧಾನಿ ಹುದ್ದೆಯ ಘನತೆಯ ಚೌಕಟ್ಟು ಮೀರಿ ಹೋಗಬಾರದು. ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದ ಅಣಕ: ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನ ಬಜೆಟ್ ಅಧಿವೇಶನವನ್ನು ಕೇವಲ 9 ದಿನ ನಡೆಸಿದ್ದನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಇದು ಪ್ರಜಾಪ್ರಭುತ್ವದ ಅಣಕ. ಸಂಸತ್ತಿನಲ್ಲಿ ನನ್ನ ಕೊನೆಯ ಭಾಷಣ ಕ್ಕೂ ಹೆಚ್ಚು ಸಮಯ ನೀಡಲಿಲ್ಲ. ಸೋಮವಾರ ಸಂಸತ್ತಿನಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತೇನೆ ಎಂದರು.
ಅತ್ಯುತ್ತಮ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಅವರು ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದ ಹೊರೆ ನಿಭಾಯಿಸಿ ಜನಪ್ರಿಯ ಕಾರ್ಯಕ್ರಮ ಕೊಡಲು ಕಷ್ಟಪಟ್ಟಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲ ಮನ್ನಾವನ್ನೂ ಮಾಡುತ್ತಿದ್ದಾರೆ ಎಂದು ಹೇಳಿದರು.