ಮೂಲ್ಕಿ: ಮಳೆಗಾಲ ಆರಂಭ ವಾಗುವ ಮೊದಲು ಸ್ಥಳೀಯಾಡಳಿತ ಚರಂಡಿ ಮತ್ತು ರಾಜ ಕಾಲುವೆಗಳನ್ನು ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಆಗದಿದ್ದರೆ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಮಸ್ಯೆಬಾರದಂತೆ ತಡೆಯಲು ನಾಗರಿಕರು ಒಂದಷ್ಟು ಮುನ್ನೆಚ್ಚರಿಕೆಯಿಂದ ತಮ್ಮ ಮನೆಯ ಕಸವನ್ನು ಕ್ರಮ ಬದ್ಧವಾಗಿ ವಿಲೇವಾರಿಗೊಳಿಸುವ ಜವಾಬ್ದಾರಿ ನಿರ್ವಹಿಸುವ ಅಗತ್ಯ ಬಹಳಷ್ಟಿದೆ.
ಮನೆಯಲ್ಲಿ ಯಾವುದೇ ತ್ಯಾಜ್ಯ ಇದ್ದರೆ ಅದನ್ನು ರಸ್ತೆ ಬದಿಗೆ ಇರುವ ಚರಂಡಿಗೆ ಎಸೆದರೆ ಯಾ ಸೇತುವೆಯಿಂದ ಕೆಳಗೆ ನದಿಗೆ ಎಸೆದರೆ ನಮ್ಮ ಮನೆಯ ಕಸ, ತ್ಯಾಜ್ಯದ ವಿಲೇವಾರಿ ಆದಂತೆ ಎಂದು ತಿಳಿದುಕೊಳ್ಳುವ ಜನ ಇನ್ನೂ ಎಚ್ಚರಗೊಳ್ಳದ ಕಾರಣ ಚರಂಡಿ ಮತ್ತು ರಾಜ ಕಾಲುವೆಗಳಲ್ಲಿ ಕಸ, ತ್ಯಾಜ್ಯ ತುಂಬಿ ಮಳೆ ನೀರು ಹರಿಯಲು ಅಡ್ಡಿಯಾಗುತ್ತಿದೆ. ನಗರ ಪಂಚಾಯತ್ ತಮ್ಮ ಕಾರ್ಮಿಕರನ್ನು ಚರಂಡಿ ಹೂಳೆತ್ತಲು ನಿಯೋಜಿಸಿದರೆ ಅದರಲ್ಲಿ ಬಹುಪಾಲು ಬಾಟಲಿ, ಪ್ಲಾಸ್ಟಿಕ್ ವಸ್ತುಗಳು, ಮನೆಯಲ್ಲಿ ನಿರುಪಯುಕ್ತವಾಗುವ ವಸ್ತುಗಳಿಂದ ತುಂಬಿಕೊಂಡಿರುವ ಕಾಣ ಸಿಗುತ್ತದೆ.
ಎಲ್ಲ ಜನ ಜವಾಬ್ದಾರಿಯಿಂದ ತಮ್ಮ ಮನೆಗೆ ಬರುವ ನಗರ ಪಂಚಾಯತ್‌ನ ಕಸ ಸಂಗ್ರಹಿಸುವ ವಾಹನಕ್ಕೆ ತ್ಯಾಜ್ಯ ವಿಂಗಡಿಸಿ ಕೊಡುವ ಮೂಲಕ ಇನ್ನಾದರೂ ಚರಂಡಿಗೆ ಮತ್ತು ನದಿಗೆ ಎಸೆಯುವುದನ್ನು ನಿಲ್ಲಿಸಬೇಕಾಗಿದೆ.
ಜನರು ಸಹಕರಿಸಿ
ನಗರ ಪಂಚಾಯತ್ ಪ್ರತಿ ವರ್ಷವೂ ಮಳೆಗಾಲದ ಮೊದಲು ಚರಂಡಿಗಳ ಹೂಳೆತ್ತುವ ಕೆಲಸ ಮಾಡಲಾಗುತ್ತದೆ. ಈ ಬಾರಿಯೂ ಪಂಚಾಯತ್‌ನ ಬಹುತೇಕ ಕಡೆ ತ್ಯಾಜ್ಯ, ಹೂಳು ತೆರವು ಮಾಡಲಾಗಿದೆ. ಆದರೆ ಬಹಳಷ್ಟು ಕಡೆ ಜನರು ತಮ್ಮ ಮನೆಯ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುವುದರಿಂದ ಇಂತಹ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇನ್ನು ಮಂದೆಯಾದರೂ ಸಾರ್ವಜನಿಕರು ತಮ್ಮ ವರ್ತನೆಯನ್ನು ತಾವಾಗಿಯೇ ತಿದ್ದಿಕೊಂಡು ಜವಾಬ್ದಾರಿಯುತವಾಗಿ ಮನೆಯ ತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಕಾರರಿಗೆ ಕೊಟ್ಟು ಸಹಕರಿಸಬೇಕು. ಚರಂಡಿಗೆ ನದಿಗೆ ಎಸೆದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
-ಪಿ. ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ನ.ಪಂ. ಮೂಲ್ಕಿ