ಗಂಗೊಳ್ಳಿ: ತ್ರಾಸಿಯಿಂದ ಗುಜ್ಜಾಡಿ – ಗಂಗೊಳ್ಳಿಗೆ ಸಂಪರ್ಕಿಸುವ ರಸ್ತೆಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡ-ಗುಂಡಿಮಯವಾಗಿದ್ದು, ಇದನ್ನು ಸರಿಪಡಿಸುವಂತೆ ಅನೇಕ ದಿನಗಳಿಂದ ಗ್ರಾಮಸ್ಥರು ಒತ್ತಾಯಿಸುತ್ತಿದ್ದರೂ, ಆಳುವ ವರ್ಗ ಈ ಬಗ್ಗೆ ಗಮನವೇ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಸಮಾನ ಮನಸ್ಕ ಯುವಕರ ತಂಡವೊಂದು ‘ನಮ್ಮ ಊರು ನಮ್ಮ ರಸ್ತೆ’ ಅಭಿಯಾನದ ಮೂಲಕ ಈ ರಸ್ತೆಯಲ್ಲಿನ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದು, ಈಗ ಎಲ್ಲರ ಗಮನ ಸೆಳೆದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿನಿತ್ಯ ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿರುವುದಲ್ಲದೆ, ಅನೇಕ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಪ್ರತಿನಿತ್ಯ ಗಂಗೊಳ್ಳಿ ಮೀನುಗಾರಿಕಾ ಬಂದರು, ಶಾಲಾ ಕಾಲೇಜುಗಳು, ಆರೋಗ್ಯ ಕೇಂದ್ರಗಳಿಗೆ ಸಾವಿರಾರು ಜನರು ಈ ರಸ್ತೆಯ ತುಂಬಾ ಬೃಹತ್ ಗಾತ್ರದ ಹೊಂಡ ಗುಂಡಿಗಳೇ ಕಾಣುತ್ತಿತ್ತು.
ಇದರಿಂದ ಬೇಸತ್ತ ಗುಜ್ಜಾಡಿ ಗ್ರಾಮದ ಸಮಾನ ಮನಸ್ಕ ಯುವಕರ ತಂಡ ಈಗ ಹೊಂಡ ಗುಂಡಿಗಳನ್ನು ಮುಚ್ಚಿ, ರಸ್ತೆಯಲ್ಲಿ ಬಿದ್ದಿರುವ ಹೊಂಡ ಗುಂಡಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ‘ಉದಯವಾಣಿ ಸುದಿನ’ವು ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆ ಅವ್ಯವಸ್ಥೆ ಬಗ್ಗೆ ಸಚಿತ್ರ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡು ಪಿಡಬ್ಲ್ಯೂಡಿ ಇಲಾಖೆ ಸಹಾಯಕ ಎಂಜಿನಿಯರ್ ರಾಮಣ್ಣ ಗೌಡ, ಹಾಗೂ ಎಇ ಮಹಾಬಲ ನಾಯ್ಕ ಹಾಗೂ ವರ್ಕ್ ಎಂಜಿನಿಯರ್ ಮೂರ್ತಿ ಎಂಬುವರು ಎರಡು ಬಾರಿ ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆಯ ಹಾನಿಗೊಳಗಾದ ಭಾಗಗಳಿಗೆ ಭೇಟಿ ನೀಡಿ ರಸ್ತೆ ದುರಸ್ತಿಪಡಿಸುವ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಹೊಂಡ ಗುಂಡಿ ಮುಚ್ಚುವ ಯಾವುದೇ ಕೆಲಸ ಆಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಕೊಡದ ಕಾರಣ ಸ್ಥಳೀಯ ಸಮಾನ ಮನಸ್ಕರು ತಂಡದ ಸದಸ್ಯರು ‘ನಮ್ಮ ಊರು ನಮ್ಮ ರಸ್ತೆ’ ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.
ಈಗಾಗಲೇ ನಾಯಕವಾಡಿಯಿಂದ ಗುಜ್ಜಾಡಿ ಯವರೆಗಿನ ಮುಖ್ಯರಸ್ತೆಯ ಹೊಂಡಗಳಿಗೆ ಹೆಂಚಿನ ಹುಡಿಯನ್ನು ಹಾಕಿ ಹೊಂಡ ಮುಚ್ಚುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.