“ಚೌಕಿದಾರ…’ ಈ ಹೆಸರು ಕೇಳಿದೊಡನೆ ಥಟ್ಟನೆ ನೆನಪಾಗೋದೇ ಪ್ರಧಾನ ಮಂತ್ರಿ ಮೋದಿ ಅವರು. ಈ “ಚೌಕಿದಾರ’ ಇಡೀ ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದ ಪದ. “ಚೌಕಿದಾರ’ ಈಗ ಕನ್ನಡ ಚಿತ್ರದ ಶೀರ್ಷಿಕೆಯಾಗಿದೆ. ಹೌದು, ಈಗಾಗಲೇ ಚೇಂಬರ್‌ನಲ್ಲಿ ಚಿತ್ರದ ಶೀರ್ಷಿಕೆ ನೋಂದಣಿ ಆಗಿದ್ದು, ಈ ಚಿತ್ರವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿದ್ದಾರೆ.
ಎಲ್ಲಾ ಸರಿ, “ಚೌಕಿದಾರ’ ಯಾರು? ಈ ಪ್ರಶ್ನೆಗೆ ಉತ್ತರ ಗಣೇಶ್ ಎನ್ನುತ್ತಾರೆ ನಿರ್ದೇಶಕರು. ಆ ಕುರಿತು
“ಉದಯವಾಣಿ’ ಜೊತೆ ಮಾತನಾಡಿದ ಚಂದ್ರಶೇಖರ್ ಬಂಡಿಯಪ್ಪ, “ಚೌಕಿದಾರ’ ಸಿನಿಮಾ ಕುರಿತಂತೆ ಗಣೇಶ್ ಅವರೊಂದಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಕಥೆ ಮತ್ತು ಪಾತ್ರ ಕುರಿತು ಚರ್ಚಿಸಿದ ನಂತರ ಇಷ್ಟಪಟ್ಟು, ಅವರು ಸಿನಿಮಾ ಮಾಡಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ.
ಇನ್ನೊಂದು ಸುತ್ತಿನ ಅಂತಿಮ ಮಾತುಕತೆ ನಡೆದರೆ, ಚಿತ್ರ ಯಾವಾಗ, ಏನು ಎಂಬಿತ್ಯಾದಿ ಮಾಹಿತಿಗಳು ಸ್ಪಷ್ಟವಾಗಲಿವೆ. ಚಿತ್ರದ ಶೀರ್ಷಿಕೆಯನ್ನು ಮೂರು ತಿಂಗಳ ಹಿಂದೆಯೇ ನೋಂದಣಿ ಮಾಡಿಸಲಾಗಿತ್ತು’ ಎನ್ನುತ್ತಾರೆ ಬಂಡಿಯಪ್ಪ. “ಚೌಕಿದಾರ್’ನಲ್ಲಿ ಗಣೇಶ್ ಅವರು ಸುಮಾರು 55 ವರ್ಷದ ಹಿರಿಯ ನಾಗರಿಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಅದೊಂದು ಕ್ಲಾಸ್ ಆಗಿರುವ ಪಾತ್ರ.
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳು ಚಿತ್ರದಲ್ಲಿರಲಿವೆ. ರಾಜಕೀಯ ಅಂಶಗಳೂ ಚಿತ್ರದ ಹೈಲೈಟ್ ಆಗಿರಲಿವೆ. ಚಿತ್ರದ ಕಥೆಗೂ “ಚೌಕಿದಾರ’ ಶೀರ್ಷಿಕೆಗೂ ಸಂಬಂಧವಿದೆ. ಇದುವರೆಗೆ ಲವ್ವರ್ ಬಾಯ್ ಆಗಿದ್ದ ಗಣೇಶ್ ಅವರಿಗಿಲ್ಲಿ ಬೇರೆ ರೀತಿಯದ್ದೇ ಪಾತ್ರವಿದೆ. ಎಮೋಷನ್ಸ್ ಅಂಶಗಳಿಗೆ ಒತ್ತು ಕೊಡಲಾಗಿದೆ.
“ಇಂಡಿಯನ್’ ಸಿನಿಮಾಗೆ ಕಮಲಹಾಸನ್‌ಗೆ ಮೇಕಪ್ ಮಾಡಿದ್ದ ಕಲಾವಿದರು ಇಲ್ಲಿ ಗಣೇಶ್ ಅವರಿಗೆ ಮೇಕಪ್ ಮಾಡಲಿದ್ದಾರೆ. ಪ್ಯಾನ್‌ಫೇರ್ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಧರ್ಮವಿಶ್ ಸಂಗೀತ, ಸಿದ್ದೇಗೌಡ ಛಾಯಾಗ್ರಹಣ ಇರಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ “ಚೌಕಿದಾರ’ನಿಗೆ ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂಬುದು ನಿರ್ದೇಶಕರ ಹೇಳಿಕೆ.