ಬೆಂಗಳೂರು: ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದು, ಒಕ್ಕಲಿಗ ಸಮಾಜ ತಿರುಗಿ ಬೀಳಲಿದೆ ಎಂದು ಶುಕ್ರವಾರ(ನ29)ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕರು ಮತ್ತು ಮುಖಂಡರೊಂದಿಗೆ ಚಂದ್ರಶೇಖರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ‘ವಕ್ಫ್ ಮೂಲಕ ಹಿಂದೂಗಳು ಮತ್ತು ಧಾರ್ಮಿಕ ಸಂಸ್ಥೆಗಳ ಜಾಮೀನು ನುಂಗಲಾಗುತ್ತಿದೆ. ಅನ್ಯಾಯದ ವಿರುದ್ಧ ಸ್ವಾಮೀಜಿ ಮಾತನಾಡಿದ್ದಾರೆ, ಕ್ಷಮೆ ಕೇಳಿದ ಬಲಿಕವೂ ಓರ್ವ ಮತಾಂಧ ದೂರು ನೀಡಿದ್ದಕ್ಕೆ ಕ್ರಮಕೈಗೊಳ್ಳಲು ಸರಕಾರಕ್ಕೆ ಯಾವ ಧೈರ್ಯ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
‘ಸ್ವಾಮೀಜಿಗೆ ಪೊಲೀಸರು ನೋಟಿಸ್ ನೀಡಿದ್ದು ಒಕ್ಕಲಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿ ಯಾವಾಗಲೂ ಹಿಂದೂಗಳ ಪರ ನಿಲ್ಲಲಿದೆ’ಎಂದು ಅಶೋಕ್ ಹೇಳಿದರು.
‘ಅಸಾದುದ್ದೀನ್ ಓವೈಸಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಾರೆ , ಮೌಲ್ವಿಯೊಬ್ಬ ಆಂಧ್ರಪ್ರದೇಶ ಸರಕಾರಕ್ಕೆ ಬೆದರಿಕೆ ಹಾಕುತ್ತಾನೆ. ಕೆಲವರು ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಮಾಜಿ ಪ್ರಧಾನಿ ದೇವೇಗೌಡರನ್ನೇ ಖರೀದಿ ಮಾಡುವುದಾಗಿ ಹೇಳಿಕೆ ನೀಡಿದ್ದರು. ಪಾಕಿಸ್ಥಾನ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಡಿ.ಕೆ.ಶಿವಕುಮಾರ್ ಒಮ್ಮೆ ಒಕ್ಕಲಿಗರ ಪರ ಎಂದರೆ ಉಗ್ರರನ್ನು ಬ್ರದರ್ ಎನ್ನುತ್ತಾರೆ. ಯಾರ ವಿರುದ್ದವೂ ಸರಕಾರ ಕ್ರಮ ಕೆಡಿಗೊಂಡಿಲ್ಲ. ಒಕ್ಕಲಿಗರ ವಿರುದ್ಧ ದ್ವೇಷ ಸಾಧಿಸುವುದು ಕಾಂಗ್ರೆಸ್ ಪಕ್ಷದ ಧ್ಯೇಯ. ಸ್ವಾಮೀಜಿ ವಿರುದ್ಧ ಕ್ರಮ ಕೈಗೊಂಡರೆ ಇಡೀ ಒಕ್ಕಲಿಗ ಸಮಾಜ ತಿರುಗಿ ಬೀಳಲಿದೆ’ ಎಂದು ಎಚ್ಚರಿಕೆ ನೀಡಿದರು.
ಮಾಜಿ ಡಿಸಿಎಂ . ಡಾ.ಅಶ್ವತ್ಥ್ ನಾರಾಯಣ್ ಸೇರಿ ಪ್ರಮುಖ ನಾಯಕರು ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಎಫ್ಐಆರ್ ದಾಖಲು
ಚಾಮರಾಜಪೇಟೆ ವಾಲ್ಮೀಕಿನಗರ ನಿವಾಸಿ ಸೈಯದ್ ಅಬ್ಟಾಸ್ ಎಂಬವರು ನೀಡಿದ ದೂರಿನ ಮೇರೆಗೆ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ)ರ ಅಡಿ ಎಫ್ಐಆರ್ ದಾಖಲಾಗಿದೆ.
ಸೈಯದ್ ಅಬ್ಟಾಸ್ ನೀಡಿದ ದೂರಿನ ಅನ್ವಯ, ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು ಎಂದು ಶ್ರೀಗಳು ಹೇಳುವ ಮೂಲಕ ಜಾತಿ-ಜಾತಿಗಳ ನಡುವೆ ಮತೀಯ ದ್ವೇಷ, ಹುಟ್ಟುವಂತೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.