Advertisement

ಗಾಂಧೀಜಿ ಮೇಲೆ ಭಗವದ್ಗೀತೆ ಪ್ರಭಾವವಿತ್ತು

12:21 PM Oct 03, 2018 | |

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೇಲೆ ಭಗವದ್ಗೀತೆ ಬಹಳಷ್ಟು ಪ್ರಭಾವ ಬೀರಿತ್ತು ಎಂದು ಆರ್‌ಎಸ್‌ಎಸ್‌ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಗಾಂಧಿ ಜಯಂತಿ ಅಂಗವಾಗಿ ಫೌಂಡೇಷನ್‌ ಫಾರ್‌ ಇಂಡಿಕ್‌ ರಿಸರ್ಚ್‌ ಸ್ಟಡೀಸ್‌, ಮಂಗಳವಾರ ನಗರದ ಮಿಥಿಕ್‌ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ “ಸಮಯಾತೀತ ಮಹಾತ್ಮಾಗಾಂಧಿ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೀತೆಯಲ್ಲಿರುವ ಹಲವು ಶ್ಲೋಕಗಳು ಗಾಂಧೀಜಿ ಅವರ ಮೇಲೆೆ ಪ್ರಭಾವ ಬೀರಿದ್ದವು ಎಂದು ಹೇಳಿದರು

ಗಾಂಧೀಜಿ ಅವರು ಭವ್ಯ ಭಾರತದ ಬಗ್ಗೆ ಕನಸು ಕಂಡಿದ್ದರು. ದೇಸಿ ಚಿಂತನೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಗಾಂಧೀಜಿ, ಭಾರತೀಯರಲ್ಲಿ ಸ್ವದೇಶಿ ತನವನ್ನು ಬಿತ್ತಿದರು. ಚರಕ ಕೂಡ ಹಿಂದೂ ತತ್ವ ಸಿದ್ಧಾಂತವನ್ನು ಸಾರುತ್ತದೆ. ದೇಸೀಯರು ನಮ್ಮನ್ನು ಆಳಲಿ, ಆದರೆ ವಿದೇಶಿಯರು ಆಳುವುದು ಬೇಡ ಎಂಬ ಸಿದ್ಧಾಂತ ಈ ಚರಕದಲ್ಲಿ ಅಡಕವಾಗಿತ್ತು ಎಂದರು.

ಗ್ರಾಮ ಭಾರತದ ಅಭಿವೃದ್ಧಿಯ ಬಗ್ಗೆ ಕನಸು ಹೊಂದಿದ್ದ ಗಾಂಧೀಜಿ, ಯುವಜನತೆಯೇ ಭವ್ಯ ಭಾರತದ ಶಕ್ತಿ ಎಂದು ನಂಬಿದ್ದರು. ಈ ಹಿನ್ನೆಲ್ಲೆಯಲ್ಲೇ ಅವರು, ತಮ್ಮ ಪತ್ರಿಕೆಗೆ ಯಂಗ್‌ ಇಂಡಿಯಾ ಎಂದು ಹೆಸರಿಟ್ಟರು. ಹರಿಜನರ ಏಳ್ಗೆಯ ಬಗ್ಗೆಯೂ ಹಲವು ಆಲೋಚನೆಗಳನ್ನು ಹೊಂದಿದ್ದ ಗಾಂಧೀಜಿ, ಯಂಗ್‌ ಇಂಡಿಯಾ ಮತ್ತು ಹರಿಜನ ಪತ್ರಿಕೆಯಲ್ಲಿ ಸಮಾಜವನ್ನು ಎಚ್ಚರಿಸುವ ಲೇಖನಗಳನ್ನು ಬರೆಯುತ್ತಿದ್ದರು ಎಂದು ಹೇಳಿದರು.

ಮಾತೃ ಭಾಷೆಯಲ್ಲೇ ಶಿಕ್ಷಣ: ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂಬುದು ಗಾಂಧೀಜಿ ಅವರ ಆಶಯವಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಒಂದು ವಿಷಯವನ್ನು ಮಕ್ಕಳು ಆಳವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂಬುವುದು ಅವರ ನಿಲುವಾಗಿತ್ತು. ಹೀಗಾಗಿ, ಗಾಂಧೀಜಿ ಅವರ ವಿಚಾರಧಾರೆಗಳು ಇಂದಿಗೂ ಕೂಡ ಪ್ರಸ್ತುತ ಎನಿಸುತ್ತವೆ ಎಂದು ಹೇಳಿದರು.

Advertisement

ಆರ್‌.ಎಸ್‌.ಎಸ್‌ ಪ್ರಾಂತ ಕಾರ್ಯವಾಹಕ ಡಾ.ಜಯಪ್ರಕಾಶ್‌, ಕ್ಷೇತ್ರೀಯ ಸಹಕಾರ್ಯವಾಹಕ ಎನ್‌.ತಿಪ್ಪೇಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ಎನ್‌.ದಿನೇಶ್‌ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಅಸ್ಪೃಶ್ಯತೆ ಬಗ್ಗೆ ವೇದಗಳಲ್ಲಿ ಉಲ್ಲೇಖವಿಲ್ಲ: 1927 ಜುಲೈ 27ರಂದು ಗಾಂಧೀಜಿ ಅವರು ಮಿಥಿಕ್‌ ಸೊಸೈಟಿಗೆ ಭೇಟಿ ನೀಡಿದ್ದರು. ಮಿಥಿಕ್‌ ಸೊಸೈಟಿಯಲ್ಲಿ ವಿದ್ವಾಂಸರುಗಳೇ ಹೆಚ್ಚಿರುತ್ತಾರೆ ಎಂಬುವುದನ್ನು ಅವರು ತಿಳಿದುಕೊಂಡಿದ್ದರು. ಹೀಗಾಗಿ, ಇಲ್ಲಿ ಅಸ್ಪೃಶ್ಯತೆಯ ಬಗ್ಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದರು.

ನಾನು ಹಿಂದೂ. ದೇಶದಲ್ಲಿರುವ ಅಸ್ಪೃಶ್ಯತೆ ನನಗೆ ನೋವು ತಂದಿದೆ. ವೇದ ಪುರಾಣಗಳಲ್ಲಿ ಅಸ್ಪೃಶ್ಯತೆ ಬಗ್ಗೆ ಉಲ್ಲೇಖ ಇಲ್ಲ. ಹೀಗಾಗಿ ಅಸ್ಪೃಶ್ಯತೆಯನ್ನು ತೊಲಗಿಸಲು ವಿದ್ವಾಂಸರು ನನ್ನ ಕೈ ಬಲಪಡಿಸಿ ಎಂದು ಗಾಂಧೀಜಿ ಮನವಿ ಮಾಡಿದ್ದರು ಎಂದು ಆರ್‌.ಎಸ್‌.ಎಸ್‌.ನ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next