Advertisement

1934ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ ಗಾಂಧೀಜಿ; ಸಾತಂತ್ರ್ಯ ಹೋರಾಟದ ಸ್ಥಳಗಳು: ಅಂದು ಇಂದು

11:40 AM Aug 15, 2023 | Team Udayavani |

ಕುಂದಾಪುರ: 1934ರ ಫೆ. 24-25ರಂದು ಅಂದಿನ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಕುಂದಾಪುರಕ್ಕೆ ಭೇಟಿ ನೀಡಿದ್ದರು. ಫೆ. 25ರ ರಾತ್ರಿ 8 ಗಂಟೆ ಸುಮಾರಿಗೆ ಕುಂದಾಪುರಕ್ಕೆ ಆಗಮಿಸಿದ್ದ ಗಾಂಧೀಜಿಯವರು ಇಲ್ಲಿನ ನರಿಬ್ಯಾಣ (ನರಿಬೇಣ- ಈಗ ಅದುವೇ ಗಾಂಧಿ ಮೈದಾನವಾಗಿದೆ) ಮೈದಾನದಲ್ಲಿ ಸಾವಿರಾರು ಜನರು ಸೇರಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ್ದರು. ಆಗ 80 ವರ್ಷದ ಹಿರಿಯ ಮುತ್ಸದ್ಧಿ ಮಂಜಯ್ಯ ಶೇರಿಗಾರ್‌, ಖಿಲಾಫತ್‌ ಮತ್ತಿತರ ಪ್ರಮುಖರಿದ್ದರು. ಅಲ್ಲಿ ಸೇರಿದ್ದ ಜನರು ಸ್ವಯಂಪ್ರೇರಿತರಾಗಿ ಹರಿಜನ ನಿಧಿ ಹಾಗೂ ಭೂಕಂಪ ನಿಧಿಗೆ ತಮ್ಮ ದೇಣಿಗೆ ನೀಡಿದ್ದರು. ಆ ಸಭೆಯ ಕೊನೆಯಲ್ಲಿ ಕೊಟ್ಟ ಉಡುಗೊರೆಗಳನ್ನೆಲ್ಲ ಹರಾಜು ಹಾಕಿದಾಗ ಬಂದ ಹಣ 400 ರೂ. ಅದನ್ನು ಸಹ ನಿಧಿಗೆ ಸಮರ್ಪಣೆ ಮಾಡಲಾಗಿತ್ತು.

Advertisement

ಆ ದಿನ ರಾತ್ರಿ ನರಿಬ್ಯಾಣ ಮೈದಾನದ ಬಲಭಾಗದಲ್ಲೇ ಇದ್ದ ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ಣ ಕಾಮತ್‌ ಅವರ ಮನೆಯಲ್ಲಿ ಗಾಂಧಿ ವಾಸ್ತವ್ಯ ಹೂಡಿದ್ದರು. ಆ ಮನೆಯನ್ನೀಗ ಶಾಂತಿ ನಿಕೇತನ ಎಂದು ಕರೆಯಲಾಗುತ್ತಿದೆ. ಅದೀಗ ಶಾಂತಿನಿಕೇತನ ವಾರ್ಡ್‌ ಆಗಿದೆ. ಫೆ. 26ರಂದು ಗಾಂಧೀಜಿಯವರ ವಾರದ ಮೌನ ದಿನ. ಆ ದಿನ ಅವರು ಯಾರೊಂದಿಗೂ
ಮಾತನಾಡುತ್ತಿರಲಿಲ್ಲ. ಇಡೀ ದಿನವನ್ನು ಅವರು ಕುಂದಾಪುರದಲ್ಲಿ ಮೌನವಾಗಿಯೇ ಕಳೆದರು. ಮರುದಿನ ಬೆಳಗ್ಗೆ ಕುಂದಾಪುರದ ಕೋಟೆ ಬಾಗಿಲಲ್ಲಿ ಉಗಿ ಹಡಗಿನ ಮೂಲಕ ಕಾರವಾರದತ್ತ ಪ್ರಯಾಣ ಬೆಳೆಸಿದರು. ಗಾಂಧಿಯವರ ಕುಂದಾಪುರ ಭೇಟಿ ಇಲ್ಲಿನ ಜನಸಾಮಾನ್ಯರ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರಿದ್ದಲ್ಲದೆ, ಸ್ವಾತಂತ್ರ್ಯ ಹೋರಾಟ ಸಂಘಟನಾತ್ಮಕ ಸ್ವರೂಪವು ಪಡೆದುಕೊಳ್ಳಲು ಕಾರಣವಾಯಿತು

ಸಾತಂತ್ರ್ಯ ಹೋರಾಟದ ಸ್ಥಳಗಳು: ಅಂದು ಇಂದು
ಕುಂದಾಪುರ: ಪುರಸಭೆಯ 23 ವಾರ್ಡ್‌  ಗಳಲ್ಲಿ ಶಾಂತಿ ನಿಕೇತನವೂ ಒಂದು. ಶಾಸ್ತ್ರೀ ವೃತ್ತದಿಂದ ಸರ್ವಿಸ್‌ ರಸ್ತೆಯಲ್ಲಿ ಸಾಗುವಾಗ ಶಾಂತಿನಿ ಕೇತನ ಎಂಬ ಕಬ್ಬಿಣದ ಸ್ವಾಗತ ಕಮಾನು ಸಿಗುತ್ತದೆ. ಅದರ ಬುಡದಲ್ಲೇ “ಶಾಂತಿ ನಿಕೇತನ ಗಾಂಧಿ ನೆಹರೂ ನಿಲಯ 1934, 1937′ ಎಂದಿದೆ. ಶಾಂತಿನಿಕೇತನ ಎಂಬ ಮನೆಯಲ್ಲಿ ಗಾಂಧಿ ತಂಗಿದ್ದರು. ನೆಹರೂ ಮತ್ತು ಇಂದಿರಾ ಗಾಂಧಿ ಇದೇ ಮನೆಯಲ್ಲಿ ಉಳಿದಿದ್ದ ರಂತೆ. 1934ರ ಫೆ. 25ರ ರಾತ್ರಿ 8ಕ್ಕೆ ಕುಂದಾಪುರ ತಲುಪಿದ್ದ ಗಾಂಧಿ ಸಾಹುಕಾರ್‌ ಮಂಜಯ್ಯ
ಶೇರಿಗಾರ್‌ ಅಧ್ಯಕ್ಷತೆಯ ಸಭೆಯಲ್ಲಿ ಅಸ್ಪೃಶ್ಯತೆ ವಿರುದ್ಧ ಬಗ್ಗೆ ಭಾಷಣ ಮಾಡಿದ್ದರು.

ಬಳಿಕ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ 400 ರೂ.ಗಳನ್ನು ಬಿಹಾರದ ಅತಿವೃಷ್ಟಿ ಪರಿಹಾರ ನಿಧಿಗೆ ಸಂಗ್ರಹಿಸಿದ್ದರು. ರಾತ್ರಿ ನಾರಾಯಣ ಕಾಮತ್‌ರ ಶಾಂತಿನಿಕೇತನದಲ್ಲಿ ಉಳಿದು, ಫೆ. 26ರಂದು ಮುಂಜಾನೆ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಇಡೀ ದಿನ ಮೌನವ್ರತ ಆಚರಿಸಿದ್ದರು. ಮರು ದಿನ ಗಂಗೊಳ್ಳಿಗೆ ತೆರಳಿ “ದಯಾವತಿ’ ಎಂಬ ಉಗಿ ಹಡಗಿನಲ್ಲಿ ಕಾರವಾರಕ್ಕೆ ಹೋದರು. ಶಾಂತಿ ನಿಕೇತನದಲ್ಲಿ ನಾರಾಯಣ ಕಾಮತರ ಪುತ್ರ ಗೋಪಾಲಕೃಷ್ಣ ಕಾಮತ್‌ ವಾಸವಿದ್ದರು. 1960ರಲ್ಲಿ ಗಾಂಧೀಜಿ ನೆನಪಿನಲ್ಲಿ ಸ್ವಾಗತ ಕಮಾನು ರಚಿಸಿ ರಸ್ತೆಗೆ ಶಾಂತಿನಿಕೇತನ ಎಂಬ ಹೆಸರು ಇಡಲಾಯಿತು. ಕೆಲವು ವರ್ಷಗಳ ಹಿಂದೆ ಈ ಜಾಗವನ್ನು ಸುರೇಶ್‌ ಬೆಟ್ಟಿನ್‌ ಖರೀದಿಸಿದ್ದಾರೆ. ಈಗ ಹಳೆಯ ಮನೆ ಇಲ್ಲ. ಒಟ್ಟು ಕುರುಹಾಗಿ
ಸ್ವಾಗತ ಕಮಾನು ಮಾತ್ರ ಇದೆ.

ನರಿಬೇಣ ಎನ್ನಲಾಗುತ್ತಿದ್ದ ಈಗಿನ ಗಾಂಧಿ, ನೆಹರೂ ಮೈದಾನದಲ್ಲಿ ಉಪ್ಪಿನ ಸತ್ಯಾಗ್ರಹವೂ ಸೇರಿದಂತೆ ಸ್ವಾತಂತ್ರ್ಯದ ಹೋರಾಟಗಳು ನಡೆದಿವೆ. 60-70 ವರ್ಷಗಳ ಹಿಂದಿನ ರೇಡಿಯೋ ಕೇಂದ್ರ ಈಗಲೂ ಇದೆ. ಮಾಸ್ತಿಕಟ್ಟೆ ಎಂಬಲ್ಲಿ ಹೋರಾಟದ ರೂಪರೇಖೆ ತಯಾರಾಗುತ್ತಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next