Advertisement

ಗಾಂಧಿ ಸಾಕ್ಷಿ ಕಾಯಕ ಮೊಬೈಲ್‌ ಆ್ಯಪ್‌ ವಿಸ್ತರಿಸಲು ತೀರ್ಮಾನ

11:16 PM Jul 22, 2019 | Lakshmi GovindaRaj |

ಬೆಂಗಳೂರು: ಕಾಮಗಾರಿಗಳ ವಿವಿಧ ಹಂತದ ನಿಖರ ಫೋಟೋಗಳನ್ನು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಅಳವಡಿಸಲು “ಮೊಬೈಲ್‌ ಆ್ಯಪ್‌’ ಅನುಷ್ಠಾನಕ್ಕೆ ತರಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಇಲಾಖೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಬಿಲ್‌ ಪಾವತಿಸಲು ಲೋಪರಹಿತ ಹಾಗೂ ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತಹ ವ್ಯವಸ್ಥೆ ತರುವ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಅನುಷ್ಠಾನಕ್ಕೆ ತರಲಾಗುತ್ತಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ “ನ್ಯಾಷನಲ್‌ ಇನಾ#ರ್‌ವೆುಟಿಕ್‌ ಸೆಂಟರ್‌’ (ಎನ್‌ಐಸಿ) ಮೂಲಕ ಅಭಿವೃದ್ಧಿಪಡಿಸಿರುವ “ಜಿಎಸ್‌ಕೆ ಆ್ಯಪ್‌’ ಪ್ರಾಥಮಿಕ ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಅಲ್ಲಿ ಯಶಸ್ವಿಯಾಗಿ ಜಾರಿಗೆ ತಂದ ಬಳಿಕ ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಮೊಬೈಲ್‌ ಆ್ಯಪ್‌ ಅನುಷ್ಠಾನಕ್ಕೆ ತರಲು ಇಲಾಖೆ ಮುಂದಾಗಿದೆ.

ಪ್ರಸ್ತುತ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಾರಂಭಿಕ ಹಂತದ ಫೋಟೋ, ಪರಿಶೀಲನಾ ಹಂತದ ಫೋಟೋ ಹಾಗೂ ಅಂತಿಮ ಹಂತ ಅಥವಾ ಕಾಮಗಾರಿ ಪೂರ್ಣಗೊಂಡ ಫೋಟೋಗಳನ್ನು ಜಿಪಿಎಸ್‌ ಕೋಆರ್ಡಿನೇಟ್‌ಗಳನ್ನು ಹಸ್ತಚಾಲಿತ (ಮ್ಯಾನುಯೆಲ್‌) ಪದ್ಧತಿಯಲ್ಲಿ ಮಾಡಲಾಗುತ್ತಿತ್ತು. ಈವರೆಗೆ ಜಿಯೊ-ಸ್ಟಾಂಪಿಂಗ್‌ ಮಾಡಲಾಗುತ್ತಿರಲಿಲ್ಲ. ಹೀಗಾಗಿ, ಅಳವಡಿಸಲಾದ ಕಾಮಗಾರಿಗಳ ಫೋಟೋಗಳಲ್ಲಿ ಸಾಕಷ್ಟು ಲೋಪಗಳು ಕಂಡು ಬರುತ್ತಿದ್ದವು.

ಅಲ್ಲದೇ ಒಂದೇ ಕಾಮಗಾರಿಗೆ ಒಂದಕ್ಕಿಂತ ಹೆಚ್ಚು ಫೋಟೋಗಳು ಅಳವಡಿಸಲಾಗುತ್ತಿತ್ತು. ಕಾಮಗಾರಿಗಳು ಪುನರಾವರ್ತನೆಗೊಳ್ಳುತ್ತಿದ್ದವು. ಇದರಿಂದ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ಕಷ್ಟವಾಗುತ್ತಿತ್ತು. ಬಿಲ್‌ ಸೃಷ್ಟಿ ಹಾಗೂ ಬಿಲ್‌ ಪಾವತಿ ಎರಡರಲ್ಲೂ ವಿಳಂಬವಾಗುತ್ತಿತ್ತು. ಇದು ಹಣ ಅಪವ್ಯಯಕ್ಕೂ ಕಾರಣವಾಗುತ್ತಿತ್ತು. ಈ ಎಲ್ಲ ಲೋಪಗಳಿಗೆ ಪರಿಹಾರ ಕಂಡುಕೊಳ್ಳಲು ಜಿಎಸ್‌ಕೆ ಆ್ಯಪ್‌ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಮತ್ತು ಅಧೀನ ಸಂಸ್ಥೆಗಳ ಕಾಮಗಾರಿಗಳ ವಿವಿಧ ಹಂತದ ಫೋಟೋಗಳನ್ನು ಅಳವಡಿಸಲು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ ಜಾರಿಗೆ ತರಲಾಗಿತ್ತು. ಇದರಲ್ಲಿ ಮೊಬೈಲ್‌ ಆ್ಯಪ್‌ ಅನುಷ್ಠಾನಕ್ಕೆ ತರುವ ಪ್ರಯತ್ನ 2016ರಲ್ಲಿ ಪ್ರಾರಂಭವಾಗಿತ್ತು. 2017ರಲ್ಲಿ ಇದಕ್ಕೊಂದು ರೂಪ ಕೊಟ್ಟು ಆಯ್ದ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಬಳಿಕ ಅದರ ಸಾಧಕ-ಬಾಧಕಗಳನ್ನು ಗಮನಿಸಿ ಈಗ ಪೂರ್ಣ ಪ್ರಮಾಣದ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ.

Advertisement

ಜುಲೈ 25ರಿಂದ ಅನುಷ್ಠಾನ: ಈ ಜಿಎಸ್‌ಕೆ ಮೊಬೈಲ್‌ ಆ್ಯಪ್‌ಅನ್ನು ಪ್ರಾಥಮಿಕ ಹಂತದಲ್ಲಿ ತುಮಕೂರು ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ಅನುಷ್ಠಾನಕ್ಕೆ ತರಲಾಗಿತ್ತು. ಅಲ್ಲಿ ಈ ಪ್ರಯೋಗ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ. ಅದರಂತೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಎಲ್ಲ ಜಿಪಂ, ತಾಪಂ, ಗ್ರಾಪಂ ಹಾಗೂ ಇತರೆ ಅಧೀನ ಇಲಾಖೆಗಳಾದ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಗಮ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ನಿರ್ಮಿತಿ ಕೇಂದ್ರಗಳಲ್ಲಿ ಇದೇ ತಿಂಗಳ 25ರಿಂದ ಕಡ್ಡಾಯವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.

ಏನಿದು ಜಿಎಸ್‌ಕೆ ಆ್ಯಪ್‌?: ಜಿಎಸ್‌ಕೆ ಮೊಬೈಲ್‌ ಆ್ಯಪ್‌ನಲ್ಲಿ ಜಿಯೋ ಸ್ಟಾಂಪಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮೊಬೈಲ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು, ಆ ಆ್ಯಪ್‌ ಮೂಲಕವೇ ಕ್ಯಾಮರಾ ಓಪನ್‌ ಮಾಡಿ ಕಾಮಗಾರಿಗಳ ಫೋಟೋ ತೆಗೆಯಬೇಕು. ಆಗ, ಆ ಫೋಟೋ ಯಾವ ಭೌಗೋಳಿಕ ಪ್ರದೇಶದ್ದು ಹಾಗೂ ಎಷ್ಟು ಸಮಯದಲ್ಲಿ ತೆಗೆಯಲಾಗಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದರಿಂದ ಕಾಮಗಾರಿಗಳ ಪುನರಾವರ್ತನೆ ತಡೆಯಬಹುದು. ಒಂದು ಪ್ರದೇಶದ ಕಾಮಗಾರಿಯ ಫೋಟೋ ಹಾಕಿ ಇನ್ನೊಂದು ಪ್ರದೇಶದ ವಿವರಣೆ ಕೊಟ್ಟು ಬಿಲ್‌ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನಗಳಿಗೆ ಕೊನೆ ಬೀಳಲಿದೆ.

ಜಿಎಸ್‌ಕೆ ಆ್ಯಪ್‌ ಪ್ರಾಥಮಿಕ ಹಂತದಲ್ಲಿ ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಜಾರಿಗೆ ತರಲಾಗಿತ್ತು. ಅದರ ಯಶಸ್ಸು ಆಧರಿಸಿ ಈಗ ಎಲ್ಲ ಕಡೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಕಾಮಗಾರಿಗಳ ಫೋಟೋಗಳನ್ನು ಅಳವಡಿಸುವಾಗ ಆಗುತ್ತಿದ್ದ ಗೊಂದಲಗಳಿಗೆ ಕೊನೆ ಬೀಳಲಿದೆ.
-ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next