Advertisement

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ

12:33 AM Nov 15, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ನ 50 ಶಾಸಕರನ್ನು ಖರೀದಿಸಲು ಬಿಜೆಪಿ ತಲಾ 50 ಕೋಟಿ ರೂ. ಆಮಿಷ ಒಡ್ಡಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಗುರುವಾರ ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದು, ಒಂದೋ ಸಾಕ್ಷಿ ನೀಡಿ ಇಲ್ಲವೇ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.

Advertisement

ಆಮಿಷ ಒಡ್ಡಿದವರು ಯಾರು ಎಂದು ಸಾಕ್ಷಿ ನೀಡಿ. ಈ ಬಗ್ಗೆ ಇ.ಡಿ.ಯಿಂದ ತನಿಖೆ ನಡೆಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌, ಶಾಸಕರಾದ ಸಿ.ಟಿ. ರವಿ., ಸುನಿಲ್‌ಕುಮಾರ್‌ ಆಗ್ರಹಿಸಿದ್ದಾರೆ.

ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ತಮ್ಮ ಶಾಸಕರಿಗೆ ಮಾರುಕಟ್ಟೆ ಬೆಲೆ ನಿಗದಿಪಡಿಸುತ್ತಿರುವಂತಿದೆ. ತಲಾ 50 ಕೋಟಿಯಂತೆ 50 ಶಾಸಕರಿಗೆ 2,500 ಕೋಟಿ ರೂ. ಆಗಲಿದೆ. ಇಷ್ಟೊಂದು ಹಣವನ್ನು ಕೊಡುವವರ್ಯಾರು? ಎಲ್ಲಿದೆ? ಪಡೆಯುವರ್ಯಾರು? ಸಿಎಂ ಕೈಯಲ್ಲೇ ಗುಪ್ತಚರ ದಳವೂ ಇರುವುದರಿಂದ 50 ಶಾಸಕರ ಪಟ್ಟಿ ಬಿಡುಗಡೆ ಮಾಡಲಿ. ಐ.ಟಿ., ಇ.ಡಿ. ತನಿಖೆಗೂ ಒಪ್ಪಿಸಲಿ ಎಂದು ಅಶೋಕ್‌ ಆಗ್ರಹಿಸಿದ್ದಾರೆ.

ವಿಜಯೇಂದ್ರ ಪ್ರತಿಕ್ರಿಯಿಸಿ, ಸಿಎಂ ತಮ್ಮ ಶಾಸಕರ ಮೇಲಿನ ವಿಶ್ವಾಸವನ್ನು ಕಳೆದುಕೊಂಡ ಹಾಗಿದೆ. ಈ ಹೇಳಿಕೆ ತಮ್ಮ ಶಾಸಕರನ್ನು ಅಂಕೆಯಲ್ಲಿಟ್ಟುಕೊಳ್ಳಲು ಹಾಗೂ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎಂದಿದ್ದಾರೆ. ಸಾಕ್ಷ್ಯಾಧಾರ ಇದ್ದರೆ ಸಾಬೀತುಪಡಿಸಲಿ. ಇಲ್ಲದಿದ್ದರೆ ಸಾರ್ವಜನಿಕ ಕ್ಷಮೆ ಕೇಳಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 100 ಸುಳ್ಳುಗಳನ್ನು ಹೇಳಿದ್ದು, ಇದು 101ನೇ ಸುಳ್ಳು ಎಂದು ಸುನಿಲ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಅವರದೇ ಸರಕಾರವಿದೆ, ಅವರದೇ ತನಿಖಾ ಸಂಸ್ಥೆಗಳಿವೆ. 50 ಕೋಟಿ ರೂ. ಆಮಿಷದ ಮೂಲ ಯಾವುದು ಎಂದು ಬಹಿರಂಗಪಡಿಸುವ ನೈತಿಕ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next