ಕಲಬುರಗಿ: ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಹಾಸನ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಹಾಸನ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಿದ್ದಕ್ಕಾಗಿ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಗಾಂಧಿ ಪುರಸ್ಕಾರ’ ಕ್ಕೆ ಭಾಜನರಾದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸಲು ದುಡಿದು ಶೌಚಾಲಯ ನಿರ್ಮಣದಲ್ಲಿ ಕ್ರಾಂತಿಯನ್ನೆ ಮಾಡಿದ ಅಧಿಕಾರಿ ವರ್ಗದವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ ಸತ್ಕರಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವತ್ಛ ಭಾರತ ಮಿಷನ್ ಯೋಜನೆಯಡಿ 3 ತಿಂಗಳಲ್ಲಿಯೆ 57 ಸಾವಿರ ಶೌಚಾಲಯ ಹಾಗೂ 2 ವರ್ಷದಲ್ಲಿ 2 ಲಕ್ಷಕ್ಕಿಂತ ಅಧಿಕ ಶೌಚಾಲಯ ನಿರ್ಮಿಸಿ ಕ್ರಾಂತಿ ಮಾಡಿದ್ದರು.
ಜುಲೈ 2017ರ ಅಂತ್ಯಕ್ಕೆ 299907 ಶೌಚಾಲಯ ನಿರ್ಮಿಸುವ ಮೂಲಕ ಜಿಲ್ಲೆಗೆ ಹಂಚಿಕೆಯಾದ 45 ಕೋಟಿ ರೂ. ಸಂಪೂರ್ಣ ಅನುದಾನ ಖರ್ಚು ಮಾಡಿ ಆರ್ಥಿಕ ಪ್ರಗತಿಯೂ ಸಾಧಿಸಿದ್ದರು. ಹಾಸನ ಜಿಲ್ಲೆಯು 267 ಗ್ರಾಪಂಗಳು 2420 ಗ್ರಾಮಗಳನ್ನು ಹೊಂದಿದ್ದು, 357510 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿವೆ.
ಅದೇ ರೀತಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ ಅವರು ಚಿಕ್ಕಮಗಳೂರು ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಶೇ.50ರಷ್ಟು ಪ್ರಗತಿ ಸಾಧಿಸಿದ್ದಕ್ಕಾಗಿ ಅವರಿಗೂ ಸಹ ಸಚಿವರು ಗಾಂಧಿಪುರಸ್ಕಾರ ನೀಡಿ ಸನ್ಮಾನಿಸಿದರು.