Advertisement

ಪುರಭವನ ಎದುರಿನ ಗಾಂಧಿ ಪಾರ್ಕ್‌ಗೆ ಮರುಜೀವ

10:37 AM Apr 12, 2022 | Team Udayavani |

ಹಂಪನಕಟ್ಟೆ: ಕ್ಲಾಕ್‌ಟವರ್‌ ನಿಂದ ಎ.ಬಿ. ಶೆಟ್ಟಿ ಕಡೆಗೆ ಸಾಗುವ ರಸ್ತೆಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಹಿನ್ನೆಲೆಯಲ್ಲಿ ಪುರಭವನ ಎದುರಿನ ಗಾಂಧಿ ಪಾರ್ಕ್‌ ಮೂಲ ಸ್ವರೂಪ ಕಳೆದುಕೊಂಡಿದ್ದು, ಪಾರ್ಕ್ ಗೆ ಮರುಜೀವ ನೀಡಲು ಸ್ಮಾರ್ಟ್‌ಸಿಟಿ ಮುಂದಾಗಿದೆ.

Advertisement

ಕಾಮಗಾರಿ ಹಿನ್ನೆಲೆಯಲ್ಲಿ ಪಾರ್ಕ್‌ ತನ್ನ ಅಸ್ವಿತ್ವ ಕಳೆದುಕೊಂಡಿದ್ದು, ಸದ್ಯ ಇಲ್ಲಿ ಸಮತಟ್ಟು ಪ್ರದೇಶ ನಿರ್ಮಾಣವಾಗಿದೆ. ಪಾರ್ಕ್‌ನ ಪಾಶ್ವದಲ್ಲಿ ಅಂಡರ್‌ಪಾಸ್‌ ಸಾಗುವ ಕಾರಣದಿಂದಾಗಿ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವುದರಿಂದ ಪಾರ್ಕ್‌ ಪ್ರದೇಶದ ಯಾವುದೇ ಕುರುಹುಗಳು ಸದ್ಯ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸಲು ಸ್ಮಾರ್ಟ್‌ಸಿಟಿ ಯೋಜನೆ ರೂಪಿಸುತ್ತಿದೆ.

ಪುರಭವನ ಎದುರು ಗಾಂಧಿ ಪಾರ್ಕ್‌ ಮತ್ತೆ ನಿರ್ಮಾಣ ಗೊಳ್ಳಲಿದೆ. ಕಾಮಗಾರಿಗೆ ಮುನ್ನ ಪಾರ್ಕ್‌ ಯಾವ ಸ್ಥಿತಿಯಲ್ಲಿ ಇತ್ತೋ ಅದಕ್ಕಿಂತ ಸುಂದರವಾಗಿ, ಆಕರ್ಷಣೀಯವಾಗಿ ಪಾರ್ಕ್‌ ಕಂಗೊಳಿಸಲಿದೆ. ಪಾರ್ಕ್ ನೊಳಗೆ ಬಯಲು ರಂಗ ಮಂದಿರ ಸಹಿತ ಗಾಂಧಿ ಪ್ರತಿಮ ಮರುನಿರ್ಮಾಣ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೀಲನಕ್ಷೆ ತಯಾರಾಗಿದ್ದು, ಈಗಾಗಲೇ ಮೊದಲನೇ ಹಂತದ ಕಾಮಗಾರಿಯೂ ಆರಂಭಗೊಳ್ಳಲಿದೆ. ಇನ್ನು, ವಾಕಿಂಗ್‌ ಪಾಥ್‌ ಕೂಡ ನಿರ್ಮಾಣವಾಗುತ್ತಿದೆ.

ಪುರಭವನ ಎದುರಿನ ಗಾಂಧಿ ಪಾರ್ಕ್‌ ಹಿರಿಯ ನಾಗರಿಕರ ನೆಚ್ಚಿನ ತಾಣವಾಗಿತ್ತು. ಬೆಳಗ್ಗೆ, ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಇದೇ ಪಾರ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು. ಸ್ಟೇಟ್‌ಬ್ಯಾಂಕ್‌, ಹಂಪನಕಟ್ಟೆ ಪರಿಸರದಲ್ಲಿ ಇತರ ದೊಡ್ಡ ಮಟ್ಟಿನ ಪಾರ್ಕ್‌ ಇಲ್ಲದ ಕಾರಣ, ಹೆಚ್ಚಿನ ಮಂದಿ ಇದೇ ಪಾರ್ಕ್‌ ಉಪಯೋಗಿಸುತ್ತಿದ್ದರು. ಈ ಪಾರ್ಕ್ ಗೆ ಆಗಮಿಸುತ್ತಿದ್ದ ಹೆಚ್ಚಿನ ಹಿರಿಯ ನಾಗರಿಕರು ಸದ್ಯ ಠಾಗೋರ್‌ ಪಾರ್ಕ್‌ ಅವಲಂಭಿಸಿದ್ದಾರೆ. ಆದರೆ ಸದ್ಯ ಠಾಗೋರ್‌ ಪಾರ್ಕ್‌ನಲ್ಲಿಯೂ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

ತಿಂಗಳೊಳಗೆ ಅಂಡರ್‌ಪಾಸ್‌ ಸಿದ್ದ

Advertisement

ನಗರದ ಕುದ್ಮಲ್‌ ರಂಗರಾವ್‌ ಪುರಭವನದ ಬಳಿ ನಿರ್ಮಾಣವಾಗುತ್ತಿರುವ ಪಾದಚಾರಿ ಅಂಡರ್‌ಪಾಸ್‌ (ಪೆಡೆಸ್ಟ್ರಿಯನ್‌ ಪ್ಲಾಜಾ) ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸುಮಾರು 9 ಕೋ.ರೂ. ವೆಚ್ಚದಲ್ಲಿ ಈ ಅಂಡರ್‌ಪಾಸ್‌ ನಿರ್ಮಾಣವಾಗುತ್ತಿದ್ದು, ಅಂಡರ್‌ಪಾಸ್‌ನ ಎರಡು ಕಡೆಗಳಲ್ಲಿ ಮೇಲೆ ಬರಲು ಅಥವಾ ಒಳಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಮಿನಿವಿಧಾನ ಸೌಧದ ಬಳಿ ಅಂಡರ್‌ಪಾಸ್‌ ನಲ್ಲಿ ಇಳಿದವರು ಲೇಡಿಗೋಶನ್‌ ಆಸ್ಪತ್ರೆ, ಸೆಂಟ್ರಲ್‌ ಮಾರುಕಟ್ಟೆಗೆ ಹೋಗಬೇಕು ಎಂದಿದ್ದರೆ, ಅಂಡರ್‌ಪಾಸ್‌ನ ಕೊನೇ ಭಾಗದಲ್ಲಿ ಮೇಲಕ್ಕೆ ಬಂದು ಸಾಗಬಹುದು. ಇದರ ನಡುವೆ ನೆಹರೂ ಮೈದಾನ ಕಡೆಗೆ ಹೋಗುವವರಿದ್ದರೆ, ಪಾರ್ಕ್‌ನ ಆರಂಭದ ಭಾಗದಲ್ಲಿ ಮೇಲೆ ಬಂದು ಪುರಭವನ, ನೆಹರೂ ಮೈದಾನ ಕಡೆಗೆ ಸಾಗಬಹುದು. ಬಸ್‌ನಿಲ್ದಾಣಕ್ಕೆ ಹೋಗಬೇಕು ಎನ್ನುವವರು ಪಾರ್ಕ್‌ನ ಇನ್ನೊಂದು ಭಾಗದಲ್ಲಿ ಮೇಲಕ್ಕೆ ಬಂದು ಹೋಗಬಹುದು ಈ ರೀತಿ ಸಾರ್ವಜನಿಕರಿಗೆ ಅವಕಾಶಗಳಿವೆ.

ಪಾರ್ಕ್‌ಗೆ ಹೊಸ ರೂಪ

ಪುರಭವನದ ಮುಂಭಾಗ ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗಾಂಧಿ ಪಾರ್ಕ್‌ ತನ್ನ ಸ್ವರೂಪ ಕಳೆದುಕೊಂಡಿದೆ. ಅದೇ ಪ್ರದೇಶದಲ್ಲಿ ಮತ್ತೆ ಪಾರ್ಕ್‌ ನಿರ್ಮಾಣ ಮಾಡಿ ಗಾಂಧಿ ಪ್ರತಿಮೆ ಮರು ನಿರ್ಮಾಣ ಮಾಡಲಾಗುತ್ತದೆ. ಇಲ್ಲೇ ಸಣ್ಣದಾದ ಬಯಲು ರಂಗ ಮಂದಿರ ಕೂಡ ನಿರ್ಮಾಣವಾಗಲಿದೆ. ಅಂಡರ್‌ ಪಾಸ್‌ ಕಾಮಗಾರಿ ಕೊನೆಯ ಹಂತದಲ್ಲಿದ್ದು, ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. –ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next