ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ಭವನ, ತೋಟಗಾರಿಕೆ ಇಲಾಖೆಯ ಸಹಯೋಗ ದಲ್ಲಿ ಚಾಮರಾಜೇಂದ್ರ (ಕಬ್ಬನ್) ಉದ್ಯಾನ ವನ ಮತ್ತು ಬಾಲ ಭವನ ಆವರಣದಲ್ಲಿ ಆಯೋಜಿಸಿದ್ದ “ಮಕ್ಕಳ ವಿಷಯಾಧಾರಿತ ಪುಷ್ಪ ಪ್ರದರ್ಶನ’ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಆರ್. ಹೆಬ್ಟಾಳ್ಕರ್ ಶುಕ್ರವಾರ ಚಾಲನೆ ನೀಡಿದರು.
ಶುಕ್ರವಾರದಿಂದ ಭಾನುವಾರ (ಡಿ.1)ದವರೆಗೆ ಒಟ್ಟು 3 ದಿನಗಳ ಕಾಲ ಜರುಗಲಿರುವ ಈ ಪ್ರದರ್ಶನದಲ್ಲಿ ಆನೆ, ಚಿಟ್ಟೆ, ಇರುವೆ, ಅಣಬೆ, ರೋಬೋಟ್, ಸ್ಯಾಟಲೈಟ್, ಡೈನೋಸರಸ್, ಮಿಕ್ಕಿಮೌಸ್, ಐಸ್ಕ್ರೀಂ, ನವಿಲು ಮತ್ತಿತರ ಕಲಾಕೃತಿಗಳನ್ನು ತರಕಾರಿ-ಪುಷ್ಪಗಳಿಂದ ಅಲಂಕರಿಸಿದ್ದು ಮಕ್ಕಳನ್ನು ಆಕರ್ಷಿಸುತ್ತಿವೆ. ಮಕ್ಕಳು ಹಾಗೂ ಸಾರ್ವಜನಿಕರು ಪುಷ್ಪಾಕೃತಿಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು.
ಈ ಪ್ರದರ್ಶನಕ್ಕೆ ಸುಮಾರು ಒಂದು ಲಕ್ಷ ದಷ್ಟು ಕೊಯ್ದ ಹೂವು ಮತ್ತು 15ರಿಂದ 20 ಸಾವಿರದಷ್ಟು ಹೂವಿನ ಕುಂಡಗಳನ್ನು ಬಳಸಲಾಗಿದೆ. 2017ರ ನಂತರ ಸ್ಥಗಿತ ಗೊಂಡಿದ್ದ ಈ ಪ್ರದರ್ಶನವನ್ನು ಈ ಬಾರಿ ಪುನರಾರಂಭಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ (ಕಬ್ಬನ್ ಪಾರ್ಕ್)ಯ ಉಪ ನಿರ್ದೇಶಕಿ ಕುಸುಮಾ ತಿಳಿಸಿದರು.
ವಾದ್ಯರಂಗ ಮಂಟಪದಲ್ಲಿ ನಾಟ್ಯ ತರಂಗ ಪುನಾರಂಭ
ತೋಟಗಾರಿಕಾ ಇಲಾಖೆಯಿಂದ ಬೆಂಗಳೂರಿನ ಕಬ್ಬನ್ ಉದ್ಯಾನವನದ ವಾದ್ಯರಂಗ ಮಂಟಪದಲ್ಲಿ ಪ್ರತಿ ಭಾನುವಾರ ಬೆಳಗ್ಗೆ ನಾಟ್ಯ ತರಂಗ- ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸ ಲಾಗಿತ್ತು. ಆದ್ದರಿಂದ ಶುಕ್ರವಾರದಂದು ನಾಟ್ಯ ತರಂಗ ಕಾರ್ಯಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಚಾಲನೆ ನೀಡಿದರು.