Advertisement

Gandhi Jayanthi: “ಗಾಂಧೀ’ ಎನ್ನುವ ಸತ್ವದ ಅನ್ವೇಷಣೆ

02:01 AM Oct 02, 2024 | Team Udayavani |

ಸತ್ಯ, ಅಹಿಂಸೆ, ಸ್ವರಾಜ್ಯ, ಸರ್ವೋದಯ, ಸ್ವದೇಶಿ, ಧರ್ಮ, ಪ್ರಾರ್ಥನೆ, ಸಚ್ಚಾರಿತ್ರ್ಯ ಇವೇ ಮುಂತಾದ ಪಾರಂಪರಿಕ ಪರಿಕಲ್ಪನೆಗಳಿಗೆ ನವಚೇತನ ತುಂಬುವ ಮೂಲಕ ಮೋಹನದಾಸ ಕರಮಚಂದ ಗಾಂಧೀ ಜನಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಿದ ರೀತಿಗೆ ಸಾಮ್ರಾಜ್ಯಶಾಹಿ ಶಕ್ತಿಯೇ ಬೆರಗಾಗಿ ಹೋಗಿತ್ತು.

Advertisement

ಈ ಪರಿಕಲ್ಪನೆಗಳನ್ನು ದಿನನಿತ್ಯದ ಬದುಕಿನಲ್ಲಿ ಅನುಸರಿಸುವ ತತ್ವಗಳಾಗಿ ಅನುಷ್ಠಾನಕ್ಕೆ ತರುವ ಮೂಲಕ ಮೋಹನದಾಸರು ಗಾಂಧಿಯಾಗಿ ಬದಲಾದರೆ, ಕನಸುಗಳೇ ಇಲ್ಲದ, ದನಿಯಿಲ್ಲದ ಸಮುದಾಯ ತನ್ನ ನೋವಿಗೆ ಸತ್ಯಾಗ್ರಹ, ಅಹಿಂಸೆ ಮತ್ತು ಧರ್ಮದ ಮೂಲಕ ಗಂಟಲಾದ ರೀತಿಗೆ ದೇಶವೇ ಬೆರಗಾಗಿ ಹೋಗಿತ್ತು.

ಗಾಂಧಿಯೊಳಗೆ ಶಿಕ್ಷಣದ ಮೂಲಕ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಅನ್ಯಾಯವನ್ನು ವಿರೋಧಿಸುವ “ವಕೀಲ’ ಮತ್ತು ಪುರುಷಾರ್ಥ ಸಾಧನೆಯ ಹಾದಿಯಲ್ಲಿ ನಡೆಯಲಿಚ್ಛಿಸುವ ವೈಷ್ಣವ ಧರ್ಮ ಸಂಜಾತ ಪರಮ ಧಾರ್ಮಿಕತೆ ಇರುವ ಎರಡು ಮನೋಸ್ಥಿತಿ ಇತ್ತು. ಈ ಎರಡು ಮನೋಸ್ಥಿತಿಗಳ ನಡುವೆ ನಡೆದ ಒಂದು ಸುದೀರ್ಘ‌ ಸಂಘರ್ಷದ ಫ‌ಲವಾಗಿ ಮೂಡಿದ ವಿವೇಕವೇ ಪುರುಷಾರ್ಥ ಚಿಂತನೆಯ ಪುನರ್‌ ನಿರ್ವಚನವೆನ್ನುವ “ಗಾಂಧೀ ಮಾರ್ಗ’.

ಈ ಮಾರ್ಗದಲ್ಲಿ ನಡೆದ ಗಾಂಧಿ, “ಇಹ ಮತ್ತು ಪರ’, “ಅರ್ಥ ಮತ್ತು ಮೋಕ್ಷ’, “ಅಧಿಕಾರ ಮತ್ತು ನ್ಯಾಯ’ಗಳ ನಡುವೆ ಸಮತೋಲನ/ಸಹಮತ ಸಾಧಿಸಿದರು. ಈ ಕಾರಣಕ್ಕಾಗಿಯೇ ಗಾಂಧೀಜೀಯವರ ಸಂಪರ್ಕಕ್ಕೆ ಬಂದ ಸಾಮಾನ್ಯರನ್ನೂ ಗಾಂಧಿ ಮುಟ್ಟಿದರು, ತಟ್ಟಿದರು. ಅವರ ಕುರಿತ ಅಧ್ಯಯನಗಳು ಹೇಳುವ ಹಾಗೆ ಪುರುಷಾರ್ಥ ಸಾಧನೆಯ ಹೊಸ ಚಿಂತನಾ ವಿನ್ಯಾಸವೇ ಅವರ ಮಾಂತ್ರಿಕ ವ್ಯಕ್ತಿತ್ವದ ಹಿಂದಿನ ಚಾಲಕ ಶಕ್ತಿ ಎನ್ನಬಹುದು.

ಭಾರತೀಯ ಚಿಂತನಾ ಪರಂಪರೆಯಲ್ಲಿ ಮೋಕ್ಷ ಚಿಂತನೆಗೆ ತುಂಬಾ ಮಹತ್ವ ನೀಡಿ ಉಳಿದ ಮೂರು ವಿಷಯಗಳು ಅಷ್ಟು ಮಹತ್ವದ್ದಲ್ಲವೆಂದು ತಿಳಿದಿದ್ದ ಕಾಲವಿತ್ತು. ಆದರೆ ಸಂಪತ್ತು ಮತ್ತು ರಾಜಕೀಯ ಅಧಿಕಾರ ಕೇಂದ್ರಿತ, ಪ್ರಾಪಂಚಿಕತೆಗೆ ಮಾರುಹೋದ ವಸಾಹತು ಶಕ್ತಿ ನಮ್ಮನಾಳುತ್ತಿತ್ತು. ಧರ್ಮ ಸಂಜಾತ ಧಾರ್ಮಿಕ ಗಾಂಧಿಯ ತಿಳಿವಳಿಕೆಯ ಪ್ರಕಾರ ಧರ್ಮ, ಅರ್ಥ, ಕಾಮ, ಮೋಕ್ಷ ಎನ್ನುವ ಪುರುಷಾರ್ಥ ಸಾಧನೆ ಮನುಷ್ಯನ ಜೀವನದ ಗುರಿ ಮತ್ತು ದಾರಿಯನ್ನು ನಿರ್ಧರಿಸುತ್ತದೆ.

Advertisement

ಕಾಲದ ಪ್ರಭಾವವನ್ನು ತಿಳಿದು ಬದಲಾದ ಪರಿಸ್ಥಿತಿಯ ಬೆಳಕಲ್ಲಿ ಪ್ರಸ್ತುತವಾಗಿರಿಸಿಕೊಂಡು ಪುರುಷಾರ್ಥದ ಪರಿಕಲ್ಪನೆಯನ್ನು ಮರುನಿರೂಪಿಸುತ್ತಾ ಇರಬೇಕು ಎನ್ನುವುದು ಅನ್ವೇಷಕ ಮನೋಭಾವದ ಗಾಂಧಿಯ ನಿಲುವಾಗಿತ್ತು. ಇಂತಹ ತಿಳಿವಿನ ಕಾರಣದಿಂದಲೇ ಗಾಂಧಿ ಅಧಿಕಾರದ ಮೂಲಕ ಜಗತ್ತನ್ನು ಆಳುವ ಶಕ್ತಿ ಹೊಂದಿದ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ದೈತ್ಯ ಬಲವನ್ನು ಹಳೆಕಾಲದ ತಿಳಿವಳಿಕೆಯ ಮೂಲಕ ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಕೊಂಡರು.

ನಮ್ಮನ್ನು ಆಳುತ್ತಿದ್ದ, ಆಧಿಕಾರ ಚಲಾಯಿಸುತ್ತಿದ್ದ ಸಾಮ್ರಾಜ್ಯಶಾಹೀ ಶಕ್ತಿಯನ್ನು ಎದುರಿಸಲು ಹೊಸ ಅಸ್ತ್ರವೊಂದರ ಅಗತ್ಯ ತುಂಬಾ ಇದೆ ಎನ್ನುವ ವಿಷಯ ಗಾಂಧಿಗೆ ಮನವರಿಕೆಯಾಗಿತ್ತು ಎಂದು ತಿಳಿದು ಬರುತ್ತದೆ. ಈ ಕಾರಣದಿಂದಲೇ ನಮ್ಮ ಪಾರಂಪರಿಕ ತಿಳಿವಳಿಕೆಗಳ ಮರುಚಿಂತನೆ ನಡೆಸುವ ಅಗತ್ಯ ಎದುರಾಗಿ ಅರ್ಥ ಮತ್ತು ಮೋಕ್ಷ ಹೇಗೆ ಒಂದಕ್ಕೊಂದು ಪೂರಕವಾಗಿವೆ ಎನ್ನುವ ಹುಡುಕಾಟ ಅನ್ವೇಷಕ ಗಾಂಧಿಯೊಳಗೆ ಶುರುವಾದದ್ದು. ಹೀಗಾಗಿಯೇ ವರ್ತಮಾನದ ಅನುಭವದ ಆಧಾರದಲ್ಲಿ ಪುರುಷಾರ್ಥದ ಹೊಸ ವ್ಯಾಖ್ಯಾನ ಬರೆಯಲು ಗಾಂಧಿಗೆ ಕಾರಣ ಮತ್ತು ಪ್ರೇರಣೆ ದೊರೆತಿರಬೇಕು.

ವ್ಯಕ್ತಿಯೊಬ್ಬ ತನ್ನ ಅಂತಃಶಕ್ತಿಯನ್ನು ಉತ್ಕರ್ಷಿಸುವ ಮೂಲಕ ಬದುಕಿನಲ್ಲಿ ತಾನು ಸಾಧಿಸಬೇಕಿರುವ ಗುರಿಯನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಅದರ ಸಾಧನೆಗೆ ಸಾಗಬೇಕಿರುವ ದಾರಿಯಲ್ಲಿ ಬೇಕಿರುವ ಕೌಶಲ, ಬುದ್ಧಿವಂತಿಕೆ, ಛಲವೇ ಪುರುಷಾರ್ಥ. ಗುರಿಸಾಧನೆಯ ಹಾದಿಯಲ್ಲಿ ನಮ್ಮೊಳಗಿರಬಹುದಾದ ದೌರ್ಬಲ್ಯಗಳನ್ನು ಮೀರಿ, ಎದುರಾಗಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸಿ ಛಲ ಮತ್ತು ಬಲವನ್ನು ಮೈಗೂಡಿಸಿಕೊಂಡು ಮುನ್ನಡೆಯುವುದೇ ಪುರುಷಾರ್ಥ ಸಾಧನೆ ಆಗಿದೆ. ಈ ಪರಿಷ್ಕರಿತ ಪುರುಷಾರ್ಥದ ಪರಿಕಲ್ಪನೆಯಲ್ಲಿ ಲಿಂಗ ತಾರತಮ್ಯವಿಲ್ಲದ, ಜಾತೀಯತೆಯಿಲ್ಲದ, ವಿಧಿಲಿಖೀತವನ್ನು ಮೀರಿ ಆಧ್ಯಾತ್ಮಿಕ, ಭೌದ್ಧಿಕ ಹಾಗೂ ಭೌತಿಕ ಸಾಧನೆ ಮಾಡುವ ಅವಕಾಶಗಳು ಎಲ್ಲರಿಗೂ ಮುಕ್ತವಾಗಿರುತ್ತದೆ.

ಬದಲಾದ ಸನ್ನಿವೇಷದಲ್ಲಿ ಪುರುಷಾರ್ಥದ ನಾಲ್ಕು ಹಂತಗಳಾಗಿರುವ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು ಪರಸ್ಪರ ವಿರೋಧಿಯಾದ ಮತ್ತು ಒಂದು ಇನ್ನೊಂದರಿಂದ ಹೊರತಾದ ಅಂಶಗಳಾಗಿರದೆ ಪರಸ್ಪರ ಪೂರಕವಾದ ಆಂಶಗಳೆಂದು ಅವರ ತಿಳಿವಳಿಕೆ ಆಗಿತ್ತು ಎನ್ನಬಹುದು. ಅರ್ಥದ ಪುನರ್‌ ವ್ಯಾಖ್ಯಾನ ಮಡುವ ಹಂತದಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಚಿಂತನೆಯಲ್ಲಿ ವ್ಯಕ್ತವಾದ ಅಧಿಕಾರದ ಪರಿಕಲ್ಪನೆಯನ್ನು ಪರಿಷ್ಕರಿಸಿ ಅವೆರಡನ್ನೂ ಸಾಮಾಜಿಕ ಹಿತದ ದೃಷ್ಟಿಯಿಂದ ಮರುನಿರೂಪಿಸುತ್ತಾ ಹೋದರು. ಅದರಂತೆ, ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರವೆಂದರೆ ಒಂದು ನ್ಯಾಯಯುತವಾದ, ಶಾಂತಿಯುತವಾದ ಹಾಗೂ ಸಹಬಾಳ್ವೆ ಸಾಧ್ಯವಾಗುವ ಸಮುದಾಯ ನಿರ್ಮಿಸುವ ಪ್ರಕ್ರಿಯೆಯಾಗಿದೆ ಎಂದು ಕಂಡುಕೊಂಡರು.

ನಾಗರಿಕರಿಗೆ ಯಾ ಪ್ರಜೆಗಳಿಗೆ ಅನ್ವಯಿಸಿ ಹೇಳುವುದಾದರೆ ರಾಜಕೀಯ ಅಧಿಕಾರವೆನ್ನುವುದು, ಒಂದು ಸಮುದಾಯದಲ್ಲಿ ಸಾರ್ವಜನಿಕ ಜವಾಬ್ದಾರಿ ಯಾ ಹೊಣೆಗಾರಿಕೆಯ ಆಧಾರದ ಮೇಲೆ ವೈಯಕ್ತಿಕ ನಡವಳಿಕೆಗಳನ್ನು ರೂಪಿಸಿ ಅದರಂತೆ ನಡೆಯಲು ಸಾಧ್ಯವಾಗುವ ಸಮಾಜ ನಿರ್ಮಾಣ ಮಾಡುವುದಾಗಿದೆ. ವಿವೇಚನಾ ರಹಿತವಾಗಿ ಅಧಿಕಾರದ ಬಳಕೆಯಾಗಿ ನೊಂದವರು ಯಾ ಶೋಷಿತರ ದೃಷ್ಟಿಯಲ್ಲಿ ರಾಜಕೀಯ ವ್ಯವಸ್ಥೆ ಎಂದರೆ, ಶೋಷಣೆಯ ವಿರುದ್ಧ ಪ್ರತಿಭಟಿಸುವ, ಮತ್ತು ತಮಗಾಗುತ್ತಿರುವ ನೋವು ಅವಮಾನಗಳನ್ನು ವಿರೋಧಿಸಿ ನ್ಯಾಯ ಪಡೆಯುವ ಅವಕಾಶವಾಗಿದೆ.

ಈ ರೀತಿಯಾಗಿ ರಾಜಕೀಯ ಅಧಿಕಾರದ ಪರಿಕಲ್ಪನೆಯನ್ನು ಹೊಸ ವಿವೇಕದ ನೆಲೆಯಿಂದ ಬಹುತ್ವದ ಬೆಳಕಲ್ಲಿ ಕಾಣುವ ಮೂಲಕ “ಅಧಿಕಾರ ಹಾಗೂ ರಾಜಕೀಯ ವ್ಯವಸ್ಥೆಯ ಪರಿಕಲ್ಪನೆ’ಯ ನೆರಳಾಗಿದ್ದ “ಹಿಂಸೆ’ಯನ್ನು ಅವುಗಳಿಂದ ಪ್ರತ್ಯೇಕಿಸುವ ಬಹಳ ಮಹತ್ವದ ಹಾಗೆಯೇ ನಾಜೂಕಿನ ಕೆಲಸವನ್ನು ಗಾಂಧಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು ಎಂದೇ ಹೇಳಬಹುದು.

ಅಷ್ಟು ಮಾತ್ರವಲ್ಲ ಇದು ಭಾರತೀಯ ಚಿಂತನಾ ಪರಂಪರೆಗೆ ಗಾಂಧಿ ನೀಡಿದ ಅನನ್ಯ ಕೊಡುಗೆಯೂ ಹೌದು. ಆ ರೀತಿಯ ಹೊಸ ವ್ಯಾಖ್ಯಾನದ ಅನ್ವಯ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಅಂಶಕ್ಕೆ ಸಾಮಾಜಿಕ ಉತ್ತರದಾಯಿತ್ವದ ನೆಲೆಯಲ್ಲಿ ಅವಕಾಶದ ಹೆಬ್ಟಾಗಿಲನ್ನು ತೆರೆಯಲಾಯಿತು. ಗಾಂಧಿಮಾರ್ಗದ ಇಂದಿನ ಹೊಸ ವಿಳಾಸ ಮೇಲಿನ ಹಿನ್ನೆಲೆಯಲ್ಲಿ ಹುಡುಕುವ ಕೆಲಸ ನಮ್ಮ ಮುಂದಿರುವ ಇಂದಿನ ತುರ್ತು.

-ಡಾ.ಉದಯಕುಮಾರ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next